Advertisement

ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗೆ ಪರಿಹಾರ

03:50 PM Aug 09, 2022 | Team Udayavani |

ಕೋಲಾರ: ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಕಳೆದೆರಡು ದಿನಗಳಿಂದ ಜನಸ್ಪಂದನಾ ಕಾರ್ಯಕ್ರಮದ ಅಂಗವಾಗಿ ಕೆಜಿಎಫ್‌ ನಗರದ ಪ್ರತಿ ಮನೆ, ಬಡಾವಣೆಗೆ ತೆರಳಿ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದು ಗಮನಿಸಿ, ಪರಿಹಾರಕ್ಕೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಇಡೀ ದಿನ ಜನರ ಕುಂದುಕೊರತೆ ಆಲಿಸುವ ಕೆಲಸ ಮಾಡಿದ ಶಾಸಕಿ ರೂಪಕಲಾ ಜನರ ಮೆಚ್ಚುಗೆಗೆ ಪಾತ್ರರಾದರು.

Advertisement

ಶಾಸಕರು ಜನರ ಸಮಸ್ಯೆಗಳನ್ನು ಮಳೆಯಲ್ಲೇ ಆಲಿಸಲು ಕೆಜಿಎಫ್‌ ನಗರದ 15ನೇ ವಾರ್ಡಿಗೆ ಖುದ್ದು ಭೇಟಿ ನೀಡಿದಾಗ, ಜನತೆ ಚರಂಡಿ ಸ್ವಚ್ಛತೆ, ಮಕ್ಕಳ ಅನಾರೋಗ್ಯ, ಪಾರ್ಥೇನಿಯಂ, ಪೊದೆಗಳ ತೆರವು, ಹಾವುಗಳ ಕಾಟ ಹೀಗೆ ಹಲವಾರು ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹಾರಕ್ಕೆ ಮನವಿ ಮಾಡಿದರು. ಮಹಿಳೆಯರ ಮನವಿಯನ್ನು ಆಲಿಸಿದ ಶಾಸಕಿ ರೂಪಕಲಾ, ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥತಿಯನ್ನು ಅವಲೋಕಿಸಿ ಸ್ವಚ್ಛತೆ ಕಾರ್ಯ ಪ್ರಾರಂಭಿಸಲು ಸ್ಥಳದಲ್ಲೇ ಹಾಜರಿದ್ದ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿ, ಶೀಘ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಿ, ನಾನೇ ಖುದ್ದು ಭೇಟಿ ನೀಡಿ ಪರಿಶೀಲಿಸುವೆ ಎಂದು ತಿಳಿಸಿದರು.

ನಂತರ ಶಾಸಕಿ ರೂಪಕಲಾ, ವಾರ್ಡ್‌ ಸಂ.15ರ ಎಸ್‌.ಟಿ. ಬ್ಲಾಕ್‌ನಲ್ಲಿ ನಗರ ಸಭೆ ಪೌರ ಕಾರ್ಮಿಕರು ಸ್ವತ್ಛತೆ ಕಾರ್ಯ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಸ್ವಚ್ಚತೆ ಕಾರ್ಯದ ಬಗ್ಗೆ ವಿಚಾರಿಸಿದರು. ಎಸ್‌.ಟಿ. ಬ್ಲಾಕ್‌ 1-ನೇ ಬ್ರಾಂಚಿನಲ್ಲಿರುವ ಸಾರ್ವಜನಿಕರ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸುಮಾರು ವರ್ಷಗಳಾಗಿದ್ದು, ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಕೋರಿಕೆಗೆ ಸ್ಪಂದನೆ: ಕೂಡಲೇ ಸದರಿ ಸಾರ್ವಜನಿಕ ಶೌಚಾಲಯವನ್ನು ಜನರ ಉಪಯೋಗಕ್ಕೆ ಮುಕ್ತಗೊಳಿಸುವಂತೆ ಮಹಿಳೆಯರ ಕೋರಿಕೆಗೆ ಸ್ಪಂದಿಸಿದ ಶಾಸಕರು, ಸಾರ್ವಜನಿಕ ಶೌಚಾಲಯ ಕಾಮಗಾರಿ ಪೂರ್ಣಗೊಂಡಿರುವುದರ ಬಗ್ಗೆ ಮಾಹಿತಿ ಪಡೆದು ಜನರ ಉಪಯೋಗಕ್ಕಾಗಿ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೂಡಲೇ ನೀರು ಸರಬರಾಜು ಮಾಡಿ: ಕೆಜಿಎಫ್‌ ನಗರದ ಎಸ್‌.ಟಿ. ಬ್ಲಾಕ್‌ 1-ನೇ ಬ್ರಾಂಚಿನ ಮುಖ್ಯ ರಸ್ತೆಯಲ್ಲಿ ಅಮೃತ್‌ ಯೋಜನೆಯಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ದೇಶಪೂರ್ವಕವಾಗಿ ಘಟಕವನ್ನು ಚಾಲನೆ ಮಾಡುತ್ತಿಲ್ಲ ಎಂದು ಮಹಿಳೆಯರು ಶಾಸಕರಿಗೆ ದೂರು ನೀಡಿದರು.

Advertisement

ವಿಷಯ ತಿಳಿದು ಅಸಮಾಧನಗೊಂಡ ಶಾಸಕರು, ಕೂಡಲೇ ಸಂಬಂಧಪಟ್ಟ ಅಧಿಕಾರಿ ಗಳನ್ನು ಸಂಪರ್ಕಿಸಿ, ನೀರಿನ ಘಟಕ ಉಸ್ತುವಾರಿ ನೋಡಿಕೊಳ್ಳುವವರನ್ನು ಸ್ಥಳಕ್ಕೆ ಕರಸಿ ತರಾಟೆಗೆ ತೆಗೆದುಕೊಂಡರು. ಘಟಕ ಚಾಲನೆ ಮಾಡಲು ನೀರಿನ ಸರಬ ರಾಜು ಸಮರ್ಪಕವಾಗಿ ಮಾಡುತ್ತಿಲ್ಲ ಎಂಬ ಮಾಹಿತಿಯನ್ನು ಪಡೆದ ಶಾಸಕರು, ವಾಟರ್‌ ಮ್ಯಾನ್‌ರನ್ನು ಕರೆಸಿ ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ನೀರಿನ ಘಟಕವನ್ನು ರಾಜಕೀಯಕ್ಕೆ ಉಪಯೋಗಿಸಬೇಡಿ ಎಂದು ತಿಳಿಸಿ, ಕೂಡಲೇ ನೀರು ಸರಬರಾಜಿಗೆ ಸೂಚಿಸಿದರು.

ಸದರಿ ವಿಷಯದ ಬಗ್ಗೆ ಗಮನಹರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಉಪಯೋಗಕ್ಕೆ ಚಾಲನೆಯಾಗುವಂತೆ ನೋಡಿಕೊಳ್ಳಲು ಸ್ಥಳದಲ್ಲಿ ಹಾಜರಿದ್ದ ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಶಾಸಕರು ಸೂಚಿಸಿ, ತುರ್ತು ಕ್ರಮವಹಿಸಿ ಎಂದರು.

ತಮ್ಮ ಮನವಿಯನ್ನು ಪರಿಗಣಿಸಿ, ಕೂಡಲೇ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ಕ್ರಮವಹಿಸಿ, ತಾವು ನೆಲೆಸಿರುವ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿತುಕೊಳ್ಳಲು ಪ್ರಯತ್ನಿಸಿದ್ದಕ್ಕೆ ಮಹಿಳೆ ಯರು ಶಾಸಕರಿಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಪೌರಾ ಯುಕ್ತ ನವೀನ್‌ಚಂದ್ರ, ಆರೋಗ್ಯ ನಿರೀಕ್ಷಕ ಮುರಳಿ, ಮಾಜಿ ನಗರಸಭೆ ಸದಸ್ಯ ಸೆಲ್ವ ಕುಮಾರ್‌, ಮುಖಂಡರಾದ ಶ್ರೀನಿವಾಸನ್‌ ಮತ್ತಿತರರು ಹಾಜರಿದ್ದರು. ಯಾವುದೇ ಸಾರ್ವಜನಿಕ ಉದ್ದೇಶಿತ ಕಾಮಗಾರಿಗಳು ಕಾರ್ಯಗತಗೊಳ್ಳುತ್ತವೆಂದರೆ, ಅದು ಸಾರ್ವಕನಿಕರ ತೆರಿಗೆ ಹಣದಿಂದಲೇ ಎಂಬು ದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಯಾರೂ ತಮ್ಮ ಸ್ವಂತ ಹಣ ಖರ್ಚು ಮಾಡುವುದಿಲ್ಲ. ಪ್ರತಿಯೊಂದು ಸೌಲಭ್ಯವನ್ನು ಸಾರ್ವಜನಿಕರು ಉಯೋಗಿಸಿದಾಗಲೇ ನಮ್ಮ ಶ್ರಮಕ್ಕೆ ಫಲ. -ರೂಪಕಲಾ, ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next