ಭೋಪಾಲ್: ಹಿಂದೂ ಪದ ಪರ್ಷಿಯನ್ ಮೂಲದ್ದಾಗಿದ್ದು, ಇದು ತುಂಬಾ ಕೆಟ್ಟ ಅರ್ಥವನ್ನು ಹೊಂದಿದೆ ಎಂಬ ಕಾಂಗ್ರೆಸ್ ಮುಖಂಡ, ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಮಧ್ಯಪ್ರದೇಶದ ಗೃಹ ಸಚಿವ, ಬಿಜೆಪಿ ಮುಖಂಡ ನರೋತ್ತಮ್ ಮಿಶ್ರಾ ಬಲವಾಗಿ ಖಂಡಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ದೇಶದ 50ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್
ಈ ವಿವಾದಿತ ಹೇಳಿಕೆ ಕುರಿತು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿರುವ ಮಿಶ್ರಾ, ಜಾರಕಿಹೊಳಿ ಹೇಳಿಕೆ ಬಗ್ಗೆ ರಾಹುಲ್ ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದೂತ್ವದ ಬಗ್ಗೆ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಮುಖಂಡರೊಬ್ಬರು ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ ಎಂದು ಮಿಶ್ರಾ ವಾಗ್ದಾಳಿ ನಡೆಸಿದರು.
“ಯಾರಿಗೆ ಹಿಂದೂಗಳು ಮತ್ತು ಹಿಂದುತ್ವದ ಬಗ್ಗೆ ಸಮಸ್ಯೆಯಾಗುತ್ತಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು. ನೆರೆಯ ದೇಶದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಪಾಕಿಸ್ತಾನಕ್ಕೆ ಇಂತಹ (ಜಾರಕಿಹೊಳಿ) ಜನರ ಅಗತ್ಯತೆ ಇದೆ” ಎಂದು ಮಿಶ್ರಾ ವ್ಯಂಗ್ಯವಾಡಿರುವುದಾಗಿ ವರದಿ ತಿಳಿಸಿದೆ.