ಯಶವಂತಪುರ: “ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪದೇ ಪದೆ ಹೇಳುತ್ತಿದ್ದಾರೆ. ಹೀಗಾಗಿ ವರ ಸಮಾಧಾನಕ್ಕಾದರೂ ನಾನು ನಿಮ್ಹಾನ್ಸ್‌ನಲ್ಲಿ ಪರೀಕ್ಷೆಗೆ ಒಳಪಡುತ್ತೇನೆ,’ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದರು.
ಮಾಗಡಿ ಮುಖ್ಯರಸ್ತೆಯ ದೊಡ್ಡಗೊಲ್ಲರಹಟ್ಟಿಯ ಅಕ್ಷಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಸೇರ್ಪಡೆ ಹಾಗೂ ಹೇರೋಹಳ್ಳಿ ವಾರ್ಡ್ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನು ಆರೋಗ್ಯವಾಗಿದ್ದೇನೆ. ಆದರೆ, ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಕುಮಾರಸ್ವಾಮಿ ಅವರು ಪದೇ ಪದೆ ಜರಿಯುತ್ತಿದ್ದಾರೆ. ಆದ್ದರಿಂದ ಒಮ್ಮೆ ನಿಮಾನ್ಸ್ಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ,’ ಎಂದು ವ್ಯಂಗವಾಡಿದರು.
“ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಹದಗೆಟ್ಟ ರಸ್ತೆ ಕಂಡು ಈ ರಸ್ತೆಗೇಕೆ ಡಾಂಬಾರು ಹಾಕಿಲ್ಲ ಎಂದು ಪ್ರಶ್ನಿಸಿದಾಗ, ಸಮ್ಮಿಶ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದಷ್ಟೆ ಹೇಳಿದ್ದೆ. ಇಷ್ಟಕ್ಕೇ ಮುಖ್ಯಮಂತ್ರಿಯಾಗಿದ್ದ ಎಚ್‌ಡಿಕೆ, ನನ್ನ ವಿರುದ್ಧ ಗರಂ ಆಗಿ, “ನಾನು ಅಧಿಕಾರದಿಂದ ಕೆಳಗಿಳಿಯುತ್ತೇನೆ’ ಎಂದಿದ್ದರು. ಆಗ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಷೋಕಾಸ್ ನೋಟಿಸ್ ನೀಡುವುದಾಗಿ ಎಚ್ಚರಿಸಿ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದರು. ಇದರಿಂದ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದಿದ್ದಾಗಿ ಸ್ಪಷ್ಟಪಡಿಸಿದರು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಹೇರೋಹಳ್ಳಿ ವಾರ್ಡ್‌ನ ಪ್ರದೇಶಗಳಿಗೆ ಕಾವೇರಿ ನೀರು ಹಾಗೂ ಯುಜಿಡಿ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜತೆಗೆ ಅಂದ್ರಹಳ್ಳಿ, ವಿಘ್ನೇಶ್ವರ ನಗರ ರಸ್ತೆಗಳ ಡಾಂಬರೀಕರಣ ಸೇರಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ 167 ಕೋಟಿ ರೂ. ಕೊಟ್ಟಿದೆ ನೆನೆಗುದಿಗೆ ಬಿದ್ದಿದ್ದ ಸಾಕಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ.
ಮಾಗಡಿ ಮುಖ್ಯರಸ್ತೆಯ ಸಂಚಾರ ದಟ್ಟಣೆಯಿಂದ ನಾಗರಿಕರು ಪರದಾಡುತ್ತಿರುವುದನ್ನು ಮನಗಂಡು, ಸುಮ್ಮನಹಳ್ಳಿ ಜಂಕ್ಷನ್‌ನಿಂದ ದೊಡ್ಡಗೊಲ್ಲರಹಟ್ಟಿ ನೈಸ್ ಜೆಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಿಸುವಂತೆ ಮುನಿರತ್ನ ಜತೆಗೂಡಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಇದೇ ವೇಳೆ ನಟ ಅಂಬರೀಶ್ ಅವರ ಮೊದಲ ವರ್ಷದಪುಣ್ಯ ಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ತೆರಳಿದ ಎಸ್.ಟಿ ಸೋಮಶೇಖರ್, ಅಂಬರೀಶ್ ಸಮಾಧಿಗೆ ಗೌರವ ನಮನ ಸಲ್ಲಿಸಿದರು.
ಅಚ್ಚು ವೆಂಕಟೇಶ್, ಮಂಜುನಾಥ್, ಲೋಕೇಶ್ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನೂರಾರು ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಪಾಲಿಕೆ ಸದಸ್ಯ ರಾಜಣ್ಣ ಮೊದಲಾದರಿದ್ದವರು.