Advertisement

ಪತ್ರಕರ್ತೆಯಾಗಲು ಹೋಗಿ ಕರುಣಾಮಯಿಯಾದ ಸೌಮ್ಯ

12:42 PM Mar 08, 2018 | Team Udayavani |

ಮೈಸೂರು: ಆಕೆ ಬುದ್ಧಿಮಾಂದ್ಯ ಮಕ್ಕಳಿಗೆ ಗುರು. ಮಾಡದ ತಪ್ಪಿಗೆ ಸಮಾಜದಿಂದ ದೂರವಾಗಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಪಾಲಿನ ಕರುಣಾಮಯಿ. ಇದಕ್ಕಾಗಿ ತನ್ನದೇ ಸಂಸ್ಥೆಯೊಂದನ್ನು ಕಟ್ಟಿಕೊಂಡು ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುತ್ತಿರುವ ಈಕೆಯ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ . . .

Advertisement

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠ, ಗುರಿ ಹಾಗೂ ಛಲವಿದ್ದರೆ ಯಾವುದೇ ಸಾಧನೆ ಮಾಡಬಹುದು ಎಂಬುದಕ್ಕೆ ಈ ಮಹಿಳೆ ಹಲವರಿಗೆ ಉದಾಹರಣೆ. ಬುದ್ಧಿಮಾಂದ್ಯ ಮಕ್ಕಳನ್ನು ತನ್ನ ಮಕ್ಕಳಂತೆ ಪಾಲನೆ, ಪೋಷಣೆ ಮಾಡುತ್ತಾ ಅವರೊಂದಿಗೆ ಆಟ, ಪಾಠ ಸೇರಿದಂತೆ ಮಕ್ಕಳೊಂದಿಗೆ ನಲಿಯುತ್ತಿರುವ ಇವರ ಹೆಸರು ಕೆ.ವಿ.ಸೌಮ್ಯ.

ಮೈಸೂರಿನ ನಿವೇದಿತನಗರದಲ್ಲಿ ಕರುಣಾಮಯಿ ಫೌಂಡೇಷನ್‌ ಮೂಲಕ ಸುಮಾರು 50ಕ್ಕೂ ಹೆಚ್ಚು ಮಕ್ಕಳನ್ನ ವಿಶೇಷ ಕಾಳಜಿಯಿಂದ ಪೋಷಣೆ ಮಾಡುತ್ತಿದ್ದಾರೆ. ವಿಶೇಷ ಅಗತ್ಯತೆವುಳ್ಳ ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿ, ಕಾಳಜಿ ಹೊಂದಿರುವ ಸೌಮ್ಯ, ವಿಶೇಷ ಮಕ್ಕಳ ಪಾಲಿಗೆ ಶಿಕ್ಷಕಿಯಾಗಿ, ಗೆಳತಿಯಾಗಿ ಕೆಲವೊಮ್ಮೆ ತಾಯಿಯ ವಾತ್ಸಲ್ಯ, ಮಮಕಾರವನ್ನು ನೀಡುತ್ತಾ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಶ್ರಮಿಸುತ್ತಿದ್ದಾರೆ.

ಒಂದು ಮಗುವಿನಿಂದ ಆರಂಭ: ಮಂಡ್ಯ ಮೂಲದ ಸೌಮ್ಯ, ಪತ್ರಕರ್ತೆಯಾಗುವ ಕನಸಿನೊಂದಿಗೆ ಪತ್ರಿಕೋದ್ಯಮ ಪದವಿ ಪಡೆದರು, ಬದುಕಿನಲ್ಲಿ ಆಕಸ್ಮಿಕವಾಗಿ ಎದುರಾದ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ತಮ್ಮ ಜೀವನದ ಗುರಿಯನ್ನು ಬದಲಿಸಿಕೊಂಡರು. ಹೀಗಾಗಿ ಮಂಡ್ಯ ಬಿಟ್ಟು ಮೈಸೂರಿಗೆ ಬಂದ ಸೌಮ್ಯ, ವಿಶೇಷ ಅಗತ್ಯತೆ ಹೊಂದಿರುವ ಮಕ್ಕಳಿಗಾಗಿ 2014ಲ್ಲಿ ಕರುಣಾಮಯಿ ಫೌಂಡೇಷನ್‌ ಆರಂಭಿಸಿದರು.

ಇದಕ್ಕಾಗಿ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತವಾಗಿ ಸೇವೆ ನೀಡಲು ಮುಂದಾದರು. ಆದರೆ ಆರಂಭದ ದಿನಗಳಲ್ಲಿ ವಿಶೇಷ ಮಕ್ಕಳ ಪೋಷಕರಿಂದ ನಿರೀಕ್ಷಿತ ಸ್ಪಂದನೆ ದೊರೆಯದ ಕಾರಣ, ಆರಂಭದ ಒಂದು ವರ್ಷ ಕೇವಲ ಒಂದು ಮಗುವಿಗೆ ಶಾಲೆ ನಡೆಸಬೇಕಾಯಿತು,

Advertisement

ಆದರೂ ವಿಶ್ವಾಸ ಕಳೆದುಕೊಳ್ಳದ ಸೌಮ್ಯ, ಶಾಲೆಯನ್ನು ಮುಂದುವರಿಸಿದರು. ಈ ನಡುವೆ ಸೌಮ್ಯ ಅವರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗುವಿನಲ್ಲಿ ಒಂದಿಷ್ಟು ಬದಲಾವಣೆಯನ್ನು ಗಮನಿಸಿದ ವಿಶೇಷ ಮಕ್ಕಳ ಪೋಷಕರು, ತಮ್ಮ ಮಕ್ಕಳನ್ನು ಕರುಣಾಮಯಿ ಫೌಂಡೇಷನ್‌ನ ಸೇರಿಸುವ ಮನಸ್ಸು ಮಾಡಿದರು.

ಫೌಂಡೇಷನ್‌ನ ಉದ್ದೇಶ: ನಗರದಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗೆ ಸರ್ಕಾರದಿಂದ ಯಾವುದೇ ಅನುದಾನ ಲಭಿಸುತ್ತಿಲ್ಲ. ಬದಲಿಗೆ ದಾನಿಗಳು, ಶ್ರೀಮಂತರು ನೀಡುವ ದೇಣಿಗೆಯಿಂದ ಸಂಸ್ಥೆಯನ್ನು ಮುಂದುವರೆಸಲಾಗುತ್ತಿದೆ. ಸದ್ಯ ಸೌಮ್ಯ ಅವರು ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರೊಂದಿಗೆ ಐವರು ಶಿಕ್ಷಕಿಯರು ಹಾಗೂ ಮೂವರು ಆಯಾಗಳು ವಿಶೇಷ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಇನ್ನೂ ಜಿ.ಸಿ.ಚಿರಣ್‌ಕುಮಾರ್‌ ಅವರು ಕರುಣಾಮಯಿ ಫೌಂಡೇಷನ್‌ನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಪ್ರಸ್ತುತ ನಿವೇದಿತನಗರದ ಮನೆಯೊಂದರಲ್ಲಿ ನಡೆಯುತ್ತಿರುವ ಶಾಲೆಯಲ್ಲಿ 5 ರಿಂದ 43 ವರ್ಷ ವಯಸ್ಸಿನ 55 ಮಕ್ಕಳು ಸಂಸ್ಥೆಯಲ್ಲಿ ತರಬೇತಿ ನೀಡುತ್ತಿದ್ದಾರೆ.

ಸಂಸ್ಥೆಯ ಕಾರ್ಯವೈಖರಿ: ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆವರೆಗೆ ಎಲ್ಲಾ 55 ಮಕ್ಕಳಿಗೆ ಬೆಳಗ್ಗೆ ಪ್ರಾರ್ಥನೆ, ಯೋಗಾ, ಸಂಭಾಷಣೆ, ಕೌಶಲ್ಯ ತರಬೇತಿ, ದೈಹಿಕ ಹಾಗೂ ಮಾನಸಿಕ ಸಾಮರ್ಥ ಅಭಿವರ್ಧನೆಗೆ ವ್ಯಾಯಾಮ, ನಿತ್ಯ ಕರ್ಮಗಳಿಗೆ ಸ್ವಯಂ ಅರಿವು ಮೂಡಿಸಿ ಸ್ವತಃ ಅವಲಂಬಿತರಾಗುವ ಶಿಕ್ಷಣ,

ಬರವಣಿಗೆ, ಕ್ರೀಡಾ ತರಬೇತಿ, ಸಂಗೀತ ತರಬೇತಿಗಳನ್ನು ನುರಿತ ಶಿಕ್ಷಕರಿಂದ ನೀಡಲಾಗುತ್ತಿದೆ. ಇದಲ್ಲದೆ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೇಪರ್‌ಬ್ಯಾಗ್‌ ಮಾಡುವುದು, ಪೇಪರ್‌ ಬುಟ್ಟಿ, ಪ್ಲಾಸ್ಟಿಕ್‌ ಹಾರ ಮಾಡುವ ತರಬೇತಿ ಸಹ ನೀಡಲಾಗುತ್ತಿದೆ.

ಈ ರೀತಿ ವಿಶೇಷ ಮಕ್ಕಳು ತಾವು ತಯಾರಿಸಿದ ವಸ್ತುಗಳಿಂದ ಬರುವ ಲಾಭದಲ್ಲಿ ಮಕ್ಕಳಿಗೆ ಶಿಷ್ಯವೇತನ ಸಹ ನೀಡಲಾಗುತ್ತಿದ್ದು, ಸದ್ಯ ಸಂಸ್ಥೆಯ 11 ಮಕ್ಕಳು ವೃತ್ತಿಶಿಕ್ಷಣ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆತರೆ ಮಕ್ಕಳಿಗೆ ಉತ್ತಮ ರೀತಿಯ ಪೋಷಣೆ, ತರಬೇತಿ ನೀಡುವ ಜತೆಗೆ ಬುದ್ಧಿಮಾಂದ್ಯ ಮಕ್ಕಳ ವಾಸ್ತವ್ಯಕ್ಕಾಗಿ ವಸತಿ ಶಾಲೆಯನ್ನು ಆರಂಭಿಸುವ ಉದ್ದೇಶವಿದೆ ಎಂದು ಕೆ.ವಿ.ಸೌಮ್ಯ ತಿಳಿಸಿದ್ದಾರೆ.

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next