Advertisement

ಒಂದು ದಿನದ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ

06:05 AM Jan 02, 2018 | |

ಬೆಂಗಳೂರು:  ಭಾರತೀಯ ವೈದ್ಯಕೀಯ ಪರಿಷತ್ತಿನ (ಎಂಸಿಐ) ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ರಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಖಾಸಗಿ ವೈದ್ಯರು, ವೈದ್ಯಕೀಯ ಸಂಘಟನೆಗಳು ಮಂಗಳವಾರ(ಜ.2) ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗದ(ಒಪಿಡಿ) ಸೇವೆ ನೀಡದಿರಲು ನಿರ್ಧರಿಸಿವೆ.

Advertisement

ಜ್ವರ, ನೆಗಡಿ, ಕೆಮ್ಮು ಸೇರಿದಂತೆ ದಿಢೀರ್‌ ಅಸ್ವಸ್ಥದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಿರುವ ರೋಗಿಗಳು ಒಂದು ದಿನದ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಹೊರತುಪಡಿಸಿ ಪೂರ್ವ ನಿರ್ಧರಿತ ಶಸ್ತ್ರಚಿಕಿತ್ಸೆ, ತುರ್ತು ಸೇವೆ, ಅಗತ್ಯ ಆರೋಗ್ಯ ಸೇವೆಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಐಎಂಎ ರಾಜ್ಯ ಘಟಕ ಸ್ಪಷ್ಟಪಡಿಸಿದೆ.

ಬೆಂಗಳೂರಿನ 600 ಖಾಸಗಿ ಆಸ್ಪತ್ರೆ ಸೇರಿದಂತೆ ರಾಜ್ಯದ ಸುಮಾರು 40 ಸಾವಿರ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಮ್‌ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ತನಕ ಒಪಿಡಿ ಸೇವೆ ಇರುವುದಿಲ್ಲ, ಹಾಗೆಯೇ ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳ(ಒಪಿಡಿ) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ(ಐಎಂಎ) ತೀರ್ಮಾನಿಸಿದೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್‌.ಎನ್‌. ರವೀಂದ್ರ ಮಾಹಿತಿ ನೀಡಿದರು.

ಎಂಸಿಐ ಬದಲು ಎನ್‌ಎಂಸಿ ರಚನೆ ನಿರ್ಧಾರ ಕೈಬಿಡಬೇಕು. ಹೋಮಿಯೋಪತಿ, ಆಯುರ್ವೇದ ಸೇರಿ ಇತರೆ ಭಾರತೀಯ ವೈದ್ಯ ಪದ್ಧತಿ ಕಲಿತವರಿಗೆ ಅಲೋಪಥಿ ಅಭ್ಯಾಸ ಮಾಡಲು ಅಥವಾ ಔಷಧ ನೀಡಲು ಅವಕಾಶ ನೀಡಬಾರದು. ಎನ್‌ಎಂಸಿ ಜಾರಿಯಾದರೆ ವೈದ್ಯಕೀಯ ಕಾಲೇಜುಗಳ ಶುಲ್ಕ ನಿಗದಿಯ ಅಧಿಕಾರ ಆಯೋಗಕ್ಕೆ ಸೀಮಿತವಾಗಿರುತ್ತದೆ. ಇದು ವೈದ್ಯಕೀಯ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರಲಿದೆ. ರಾಜ್ಯ ಸರ್ಕಾರಕ್ಕೇ ಶುಲ್ಕ ನಿಗದಿ ಅವಕಾಶ ನೀಡಬೇಕು. ರಾಜ್ಯಗಳಿಂದ ಚುನಾಯಿತ ಪ್ರತಿನಿಧಿಗಳನ್ನು ನೇಮಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಖಾಸಗಿ ವೈದ್ಯರು ಒಂದುದಿನದ ಸಾಂಕೇತಿಕ ಹೋರಾಟ ನಡೆಸಲಿದ್ದಾರೆ.

ಕಾಯ್ದೆಯಲ್ಲೇನಿದೆ?
ನೀತಿ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಎಂಸಿಐ ಬದಲಾಗಿ ಎನ್‌ಎಂಸಿ ರಚನೆಗೆ ಮುಂದಾಗಿದೆ. ಈ ಕಾಯ್ದೆಯಡಿ ಭಾರತೀಯ ವೈದ್ಯ ಪದ್ಧತಿ ಅಭ್ಯಾಸ ಮಾಡಿದ ವೈದ್ಯರಿಗೆ ಬ್ರಿಡ್ಜ್ ಕೋರ್ಸ್‌ ಮೂಲಕ ಅಲೋಪಥಿ ಔಷಧ ನೀಡಲು ಪರವಾನಿಗೆ ನೀಡಲಾಗುತ್ತದೆ. ಎನ್‌ಎಂಸಿನಲ್ಲಿರುವ  64 ಸದಸ್ಯರಲ್ಲಿ 5 ಜನ ಚುನಾಯಿತ ಪ್ರತಿನಿಧಿಗಳು ಮತ್ತು 59 ಮಂದಿ ಕೇಂದ್ರ ಸರ್ಕಾರದ ನಾಮನಿರ್ದೇಶಿತರಾಗಿರುತ್ತಾರೆ. ವೈದ್ಯಕೀಯ ಸೀಟುಗಳ ಶುಲ್ಕ ನಿಯಂತ್ರಣದ ಹಕ್ಕಿನಲ್ಲಿ ರಾಜ್ಯದ ಪಾಲು ಕಡಿಮೆ ಆಗುತ್ತದೆ. ನೀಟ್‌ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಎಕ್ಸಿಟ್‌ ಪರೀಕ್ಷೆ ನಡೆಸುವ ಪ್ರಸ್ತಾವನೆಯೂ ಇದೆ.

Advertisement

ಸೋಮವಾರ ದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರೊಂದಿಗೆ ಖಾಸಗಿ ವೈದ್ಯರ ಸಂಘದಿಂದ ನಡೆದ ಸಭೆಯು ವಿಫಲಗೊಂಡಿದೆ. ಮಂಗಳವಾರ ಸಂಸತ್‌ ಸದಸ್ಯರನ್ನು ಭೇಟಿ ಮಾಡಿ, ಮನವರಿಕೆ ಮಾಡಿಕೊಡಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ವೈದ್ಯರು ಧರಣಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎನ್‌ಎಂಸಿ ಜಾರಿಗೊಳಿಸದಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆ
* ತುರ್ತು ಚಿಕಿತ್ಸೆ
* ಐಸಿಯು, ಸಿಸಿಯು, ಒಳರೋಗಿಗಳ ವಿಭಾಗ
* ತುರ್ತು ಶಸ್ತ್ರಚಿಕಿತ್ಸೆ, ಪೂರ್ವ ನಿರ್ಧರಿತ ಶಸ್ತ್ರಚಿಕಿತ್ಸೆ

ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೇವೆ
*ಪ್ರಯೋಗಾಲಯ
* ಹೊರ ರೋಗಿಗಳ ವಿಭಾಗ
* ಕ್ಲಿನಿಕ್‌, ನರ್ಸಿಂಗ್‌ ಹೋಂ
* ವೈದ್ಯರ ಸಂದರ್ಶನ

Advertisement

Udayavani is now on Telegram. Click here to join our channel and stay updated with the latest news.

Next