Advertisement

ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿ ನೋಂದಣಿ?

12:43 AM Jul 11, 2023 | Team Udayavani |

ಬೆಂಗಳೂರು: ಪ್ರಸ್ತುತ ಜನರು ಹತ್ತಿರದ ಸೇವಾ ಕೇಂದ್ರಗಳಿಗೆ ತೆರಳಿ “ಗೃಹಜ್ಯೋತಿ’ಗೆ ಹೆಸರು ನೋಂದಾಯಿಸಿ ಕೊಳ್ಳುತ್ತಿದ್ದಾರೆ. ಇನ್ನುಮುಂದೆ ಗ್ರಾಹಕರು ಇದ್ದಲ್ಲಿಗೆ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ತೆರಳಿ ನೋಂದಣಿ ಮಾಡಿಕೊಳ್ಳಲಿವೆ.

Advertisement

“ಗೃಹಜ್ಯೋತಿ’ಗಾಗಿ ಜೂ. 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಕರ್ನಾಟಕ ಒನ್‌, ಗ್ರಾಮ ಒನ್‌ ಮತ್ತು ಬೆಂಗಳೂರು ಒನ್‌ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸ ಲಾಗಿದೆ. ಎಸ್ಕಾಂ ಕಚೇರಿಗಳಲ್ಲೂ ಈ ಸೇವೆ ಒದಗಿಸಲಾಗುತ್ತಿದೆ. ಮುಂದೆ ಅಗತ್ಯಬಿದ್ದರೆ ಗ್ರಾಹಕರಿದ್ದಲ್ಲಿಗೆ ಹೋಗಿ ಹೆಸರು ನೋಂದಾ ಯಿಸಿಕೊಳ್ಳಲು ಎಸ್ಕಾಂಗಳು ಚಿಂತನೆ ನಡೆಸಿವೆ.

ನೋಂದಣಿ ಪ್ರಕ್ರಿಯೆ ಆರಂಭಗೊಂಡು 23 ದಿನಗಳಾಗಿದ್ದು, ಆರಂಭದಲ್ಲಿ ನಿತ್ಯ 6ರಿಂದ 8 ಲಕ್ಷ ಜನ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಆರೆಂಟು ದಿನಗಳಿಂದ ನೀರಸವಾಗಿದ್ದು, 1.5ರಿಂದ 2 ಲಕ್ಷಕ್ಕೆ ಸೀಮಿತಗೊಂಡಿದೆ.

ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ. ಈ ಹಿನ್ನೆಲೆ ಯಲ್ಲಿ ನೀರಸ ಪ್ರತಿಕ್ರಿಯೆ ಇರುವ ಕಡೆಗಳಿಗೆ ತೆರಳಿ ನೋಂದಣಿ ಮಾಡುವ ಚಿಂತನೆ ನಡೆದಿದೆ.

ಅಗತ್ಯಬಿದ್ದರೆ ಮನೆಗೇ ಭೇಟಿ
ಕೊನೆಯ ದಿನಾಂಕ ನಿಗದಿಪಡಿಸದಿರುವುದರಿಂದ ಸಾಕಷ್ಟು ಸಮಯ ಇದೆ. ಅವಕಾಶ ಸಿಕ್ಕಾಗ ಗ್ರಾಹಕರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗಗಳಲ್ಲಿ ಇದರ ಬಗ್ಗೆ ಅರಿವಿಲ್ಲದ, ಗೊತ್ತಿದ್ದರೂ ನೋಂದಣಿ ಮಾಡಿಕೊಳ್ಳ ಲಾಗದ ಅಥವಾ ಸಾಧ್ಯವಾಗದ ವರ್ಗಗಳನ್ನು ತಲುಪುವ ಆವಶ್ಯಕತೆ ಇದೆ. ಅಗತ್ಯ ಬಿದ್ದರೆ ಗ್ರಾಹಕರಿದ್ದಲ್ಲಿಯೇ ನಮ್ಮ ಮೀಟರ್‌ ರೀಡರ್‌ಗಳು ಅಥವಾ ಗ್ರಾಮ ವಿದ್ಯುತ್‌ ಪ್ರತಿನಿಧಿಗಳು ತೆರಳಿ, ನೋಂದಣಿ ಮಾಡಿಸಿ ಕೊಳ್ಳಲಿದ್ದಾರೆ ಎಂದು ಬೆಸ್ಕಾಂ ನಿರ್ದೇಶಕ (ಹಣಕಾಸು) ಜೆ. ದರ್ಶನ್‌ ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ಒಬ್ಬ ಮೀಟರ್‌ ರೀಡರ್‌ ಒಂದು ದಿನಕ್ಕೆ 250 ಮನೆಗಳ ರೀಡಿಂಗ್‌ ಮಾಡು ತ್ತಾರೆ. ಹತ್ತು ದಿನಗಳಲ್ಲಿ ಒಬ್ಬ ಸಿಬಂದಿ 2,500 ಮನೆಗಳನ್ನು ಸಂಪರ್ಕಿಸುತ್ತಾರೆ. ಅಗತ್ಯ ನೋಡಿ ಕೊಂಡು ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ಜಾಹೀರಾತುಗಳನ್ನು ನೀಡುವ ಮೂಲಕ ಜನರನ್ನು ತಲುಪುವ ಕೆಲಸವೂ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

1.02 ಕೋಟಿ ಮಂದಿ ನೋಂದಣಿ
ಇರುವ 2.15 ಕೋಟಿ ಗೃಹ ಬಳಕೆದಾರರ ಪೈಕಿ ಈವರೆಗೆ ಸುಮಾರು 1.02 ಕೋಟಿ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ನಗರ ಪ್ರದೇಶದ ನಿವಾಸಿಗಳ ಪ್ರಮಾಣ ಹೆಚ್ಚಿದೆ. ಅಂಕಿಅಂಶಗಳನ್ನು ಪರಿಶೀಲಿಸಿ, ಯಾವ ವರ್ಗ ಮತ್ತು ಪ್ರದೇಶದಲ್ಲಿ ಸ್ಪಂದನೆ ಕಡಿಮೆ ಇದೆ ಎಂಬುದನ್ನು ನೋಡಿಕೊಂಡು, ಅಲ್ಲಿ ಮನೆ ಮನೆ ಸಮೀಕ್ಷೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಸೇವಾ ಕೇಂದ್ರ ತೆರೆದು, ಪರಿಣಾಮಕಾರಿಯಾಗಿ ನೋಂದಣಿ ಪ್ರಕ್ರಿಯೆ ಕೈಗೊಳ್ಳುವ ಉದ್ದೇಶ ಇದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next