ತಿರುವನಂತಪುರ: ದೇಶದಲ್ಲಿ ಜೈ ಶ್ರೀ ರಾಮ್ ಮಂತ್ರ ಜಪಿಸುವವರಿಂದ ಆಗುತ್ತಿರುವ ಥಳಿತ ಹತ್ಯೆಗಳನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದೇಶದ ನಾನಾ ಕ್ಷೇತ್ರಗಳ ಗಣ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ವಿರುದ್ಧ ಕೇರಳ ಬಿಜೆಪಿ ವಕ್ತಾರ ಬಿ. ಗೋಪಾಲಕೃಷ್ಣನ್ ಕಿಡಿಕಾರಿದ್ದಾರೆ.
“ಭಾರತದಲ್ಲಿ ಜೈ ಶ್ರೀರಾಮ್ ಮಂತ್ರವನ್ನು ಕೇಳಲು ಅಡೂರು ಅವರಿಗೆ ಕಿರಿಕಿರಿಯಾದರೆ, ಅವರು ಚಂದ್ರ ಅಥವಾ ಬೇರೆ ಯಾವುದಾ ದರೂ ಗ್ರಹಕ್ಕೆ ಸ್ಥಳಾಂತರಗೊಳ್ಳುವುದು ಉತ್ತಮ’ ಎಂದಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಅಡೂರು ಗೋಪಾಲಕೃಷ್ಣನ್, ತಾವು ಕೇಂದ್ರ ಸರಕಾರದ ವಿರುದ್ಧವಾಗಲೀ, ಜೈ ಶ್ರೀರಾಮ್ ಜಪಿಸುವವರ ವಿರುದ್ಧವಾಗಲೀ ದನಿಯೆತ್ತಿಲ್ಲ. ಧರ್ಮದ ಹೆಸರಿನಲ್ಲಿ ಆಗುತ್ತಿರುವ ಥಳಿತ ಹತ್ಯೆಗಳನ್ನು ನಿಲ್ಲಿಸಿ ಎಂದಷ್ಟೇ ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ವ್ಯಾಪಕ ಟೀಕೆ: ಬಿಜೆಪಿ ವಕ್ತಾರರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಮಲಯಾಳಂ ಚಿತ್ರೋದ್ಯಮದ ಅನೇಕರು ಅಡೂರು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಥಳಿತ ಹತ್ಯೆ ವಿರೋಧಿಸಿ, ಜು. 23ರಂದು ಪ್ರಧಾನಿಗೆ ಬರೆಯಲಾಗಿದ್ದ ಈ ಬಹಿರಂಗ ಪತ್ರಕ್ಕೆ ಅಡೂರು ಸೇರಿದಂತೆ 49 ಗಣ್ಯರು ಸಹಿ ಹಾಕಿದ್ದರು.
ಕೊಲೆ ಬೆದರಿಕೆ: ಈ ನಡುವೆ, ಪ್ರಧಾನಿಯವರಿಗೆ ಥಳಿತ ಹತ್ಯೆಗಳ ವಿರುದ್ಧ ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದಕ್ಕಾಗಿ ತಮಗೆ ಅನಾಮಧೇಯ ವ್ಯಕ್ತಿಗಳಿಂದ ಕೊಲೆ ಬೆದರಿಗೆ ಬಂದಿದೆ ಎಂದು ಬಂಗಾಳಿ ಚಿತ್ರನಟ ಕೌಶಿಕ್ ಸೇನ್ ಅವರು ಆಪಾದಿಸಿದ್ದಾರೆ.