ಉಳ್ಳಾಲ, ಎ. 3: ಕೈರಂಗಳ ಪುಣ್ಯಕೋಟಿ ನಗರದ ಅಮೃತಾಧಾರ ಗೋಶಾಲೆಯಿಂದ ಗೋ ಕಳವುಗೈದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೋಶಾಲಾ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಮೂರನೇ ದಿನ ಪೂರೈಸಿದ್ದು, ಮಂಗಳವಾರ ಸತ್ಯಾಗ್ರಹ ಸ್ಥಳಕ್ಕೆ ಜನಸಾಗರ ಹರಿದು ಬಂದಿದೆ.
ಬೆಳಗ್ಗೆ ಗೋ ಸಂತ್ರಸ್ತರ ಸಮಾವೇಶ ನಡೆದಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಡಾ| ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಸಂಘಟನೆಗಳ ಮುಖಂಡರು ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದು, ಮಾ. 4ರಂದು ಅಪರಾಹ್ನ 3 ಗಂಟೆಗೆ ಗೋಶಾಲೆಯಲ್ಲಿ ಸಂತರ ಸಮಾವೇಶ ನಡೆಯಲಿದೆ.
ಬೆಳಗ್ಗಿನಿಂದಲೇ ಗೋಶಾಲೆಗೆ ಶ್ರೀ ರಾಮಚಂದ್ರಪುರ ಮಠದ ಶಿಷ್ಯವೃಂದ ಸೇರಿದಂತೆ ಸ್ಥಳೀಯರು ಆಗಮಿಸಿದ್ದು, ಬೆಳಗ್ಗೆ ನಡೆದ ಗೋಸಂತ್ರಸ್ತರ ಸಮಾವೇಶದಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತರು ಸೇರಿದಂತೆ ಸುಮಾರು 19 ಮಂದಿ ಗೋಸಂತ್ರಸ್ತರು ಭಾಗವಹಿಸಿ ಅಳಲು ವ್ಯಕ್ತಪಡಿಸಿದರು.
ಡಾ| ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಗೋವು ಶ್ರದ್ಧೆಯ, ದೇವತ್ವದ ರೂಪ. ಇದನ್ನು ಹೋಗಲಾಡಿಸುವ ಪ್ರಯತ್ನ ನಡೆಯುತ್ತಿದೆ. ಗೋಹಂತಕರನ್ನು ಬಂಧಿಸಬೇಕೆಂಬ ಹೋರಾಟ ಈವರೆಗೆ ನಡೆದದ್ದಿಲ್ಲ. ಇದು ಗೋವಿನ ಜತೆಗೆ ಹಿಂದೂ ಧರ್ಮದ ಉಳಿಸುವಿಕೆಗಾಗಿ ನಡೆಯುತ್ತಿರುವ ಹೋರಾಟ. ದನಗಳ ರಕ್ಷಣೆಯನ್ನು ಇಲಾಖೆ ಮಾಡುವುದಿಲ್ಲ. ಅದನ್ನು ಮಾಡಿದರೆ ನೈತಿಕ ಪೊಲೀಸ್‌ಗಿರಿ ಎನ್ನಲಾಗುತ್ತದೆ. ಗೋಕಳ್ಳರ ಬಂಧನಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಬಾರದು ನಿಲ್ಲಿಸಬೇಕು ಅನ್ನುತ್ತಾರೆ. ಆದರೆ ಇಲಾಖೆ, ಪೊಲೀಸರು, ಸರಕಾರ ಗೋಸಂರಕ್ಷಣೆ ಮಾಡುತ್ತೇವೆ ಅನ್ನುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಚಳವಳಿ ಉಗ್ರಸ್ವರೂಪ ತಳೆಯುವ ಮುನ್ನ ಸಂಬಂಧಪಟ್ಟವರು ಎಚ್ಚರಗೊಳ್ಳುವುದು ಅಗತ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ, ಹಿಂಜಾವೇಯ ರಾಧಾಕೃಷ್ಣ ಅಡ್ಯಂತಾಯ, ವಿಹಿಂಪ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿಂಜಾವೇಯ ಸತ್ಯಜಿತ್ ಸುರತ್ಕಲ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳಾ ಸೇವಾ ಟ್ರಸ್ಟ್‌ನ ಮನೋಹರ ತುಳಜಾರಾಂ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ಶ್ರೀ ಕ್ಷೇತ್ರದ ಸತೀಶ್ ಶೆಟ್ಟಿ ಪಟ್ಲ, ಆರ್‌ಎಸ್‌ಎಸ್ ಮುಖಂಡ ನಾ. ಸೀತಾರಾಮ, ಗೋ ವನಿತಾಶ್ರಯ ಟ್ರಸ್ಟ್‌ನ ಸಂಚಾಲಕ ಡಾ| ಅನಂತಕೃಷ್ಣ ಭಟ್, ಪ್ರಕಾಶ್ ಭಟ್ ಮುಂಬಯಿ, ನಿತಿನ್ ಗಟ್ಟಿ ಕುರ್ನಾಡು, ಶ್ರೀ ರಾಮಚಂದ್ರಾಪುರ ಮಠದ ಮುಳ್ಳೇರಿಯಾ, ಉಪ್ಪಿನಂಗಡಿ, ಸುಳ್ಯ, ಕಲ್ಲಡ್ಕ, ಮಂಗಳೂರು ಸಹಿತ ವಿವಿಧೆಡೆಯ ಶಿಷ್ಯವರ್ಗ ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಮನೆಗೆ ದಾಳಿ: ಮೂವರು ವಶಕ್ಕೆ
ಸಿಸಿಬಿ ತಂಡ ಮಂಜೇಶ್ವರದ ಕಜ್ಜೆ ಪದವಿನಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿ ಖಾನೆಗೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಈ ಸಂದರ್ಭ ದೊಡ್ಡ ಗಾತ್ರದ ದನದ ರುಂಡ ಪತ್ತೆಯಾಗಿದೆ.
ತಂದೆಗೆ ಮಗಳ ಸಾಥ್
ಟಿ.ಜಿ. ರಾಜಾರಾಮ ಭಟ್ ಅವರ ಉಪವಾಸ ಸತ್ಯಾಗ್ರಹಕ್ಕೆ ಅವರ ಪುತ್ರಿ ಸೌಮ್ಯಾ ಭಟ್ ಮಂಗಳವಾರ ಸಾಥ್ ನೀಡಿದ್ದಾರೆ. ಜತೆಗೆ ಪ್ರಭಾವತಿ, ಶಂಕರ ಭಟ್ ಕೊಣಾಜೆ, ನಂದ ಕುಮಾರ್ ಶೆಟ್ಟಿ, ಸೇರಿದಂತೆ ಸುಮಾರು 12 ಮಂದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಪಿಲಾಶ್ರಮದ ಗುರೂಜಿ ಬೆಂಬಲ
ಗೋಶಾಲೆಗೆ ಉತ್ತರಖಂಡದ ಕಪಿಲಾಶ್ರಮದ ರಾಮಚಂದ್ರ ಗುರೂಜಿ ಭೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಇಂದಿನಿಂದ ಸತ್ಯಾಗ್ರಹ ಮುಗಿಯುವವರೆಗೆ ಉಪವಾಸವಿದ್ದು ಬೆಂಬಲಿಸುವುದಾಗಿ ಘೋಷಿಸಿದರು.
ಸಂಸ್ಕೃತಿಯ ಅಪಹರಣ: ಒಡಿಯೂರು ಶ್ರೀ
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಗೋವು ಎಂದರೆ ಮಾತೆಯೂ ಹೌದು, ಧರ್ಮವೂ ಹೌದು, ಸಂಸ್ಕೃತಿಯೂ ಹೌದು, ರಾಷ್ಟ್ರವೂ ಹೌದು. ಅವುಗಳ ಕಳ್ಳತನವೆಂದರೆ ಸಂಸ್ಕೃತಿಯ ಅಪಹರಣ. ಗೋ ನಾಶವೆಂದರೆ ಸಂಸ್ಕೃತಿಯ ನಾಶ. ಗೋಶಾಲೆ, ಹಟ್ಟಿಯಿಂದಲೇ ಗೋ ಕಳ್ಳತನ ದಂತಹ ಕೃತ್ಯಗಳು ನಡೆಯುತ್ತಿರುವುದರಿಂದ ನಾವು ಭಾರತದಲ್ಲಿದ್ದೇವೆಯೋ ಎಂಬ ಸಂಶಯ ಮೂಡುವಂತಾಗಿದೆ ಎಂದರು.
ಹಾಲು ಕರೆದು ಒಳಗಿಟ್ಟು ಹೊರಗೆ ಬರುವಾಗ ಹಟ್ಟಿಯಲ್ಲಿ ಗೋವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಪೂಜಿಸುವ ಮಾತೆಯ ಮೇಲೆ ಆಗುತ್ತಿ ರುವ ಆಕ್ರಮಣದ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕು. ಸಮಾಜಕ್ಕೆ ತೊಂದರೆ ಆದಾಗ ಸಂತರು ಜತೆಗಿರುತ್ತಾರೆ ಎಂದು ಹೇಳಿದರು.