Advertisement

ವೈಫ‌ಲ್ಯ ಮುಚ್ಚಲು ಗೋ ಮಾರಾಟ ನಿರ್ಬಂಧ

01:12 PM May 29, 2017 | Team Udayavani |

ಮೈಸೂರು: ಜಾನುವಾರುಗಳ ಮಾರಾಟ, ಖರೀದಿಗೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ನಿಯಮಾವಳಿ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಗತ್ಯ ಬಿದ್ದರೆ ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲೂ ಸಿದ್ಧ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಯಮಾವಳಿ ಸಂಬಂಧ ಪರ-ವಿರೋಧದ ಪ್ರಶ್ನೆಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ನಿಯಮಾವಳಿ ರೂಪಿಸಬೇಕು. ರಾಜ್ಯ ಸರ್ಕಾರ ಮತ್ತು ರೈತ ಮುಖಂಡರುಗಳ ಜತೆ ಚರ್ಚಿಸಬೇಕಿತ್ತು. ಜತೆಗೆ ದೇಶಾದ್ಯಂತ ಈ ಬಗ್ಗೆ ಚರ್ಚೆ ಆಗಬೇಕು.

ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಮೂರು ವರ್ಷಗಳ ವೈಫ‌ಲ್ಯಗಳನ್ನು ಮರೆಮಾಚಲು ಇಂತಹ ಭಾವನಾತ್ಮಕ ವಿಚಾರಕ್ಕೆ ಕೈಹಾಕಿದೆ ಎಂದು ಆರೋಪಿಸಿದರು. ರೈತ ತನ್ನ ಜಾನುವಾರುಗಳನ್ನು ಮಾರಲು ಎಪಿಎಂಸಿ ಯಾರ್ಡ್‌ನಲ್ಲಿ ಪ್ರಮಾಣ ಪತ್ರ ಮಾಡಿಸಬೇಕು. ಕೊಳ್ಳುವವನೂ ರೈತನಾಗಿರುವ ಬಗ್ಗೆ ಪ್ರಮಾಣಪತ್ರ ಹಾಜರುಪಡಿಸಬೇಕು ಎಂಬಿತ್ಯಾದಿ ನಿಯಮಾವಳಿ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗಲಿದೆ.

ರೈತ, ತನ್ನ ವ್ಯವಸಾಯಕ್ಕೆ ಅನುಕೂಲವಾಗದ ಜಾನುವಾರುಗಳನ್ನು ಮಾತ್ರ ಮಾರುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆ ಬಿಟ್ಟರೆ ವ್ಯವಸಾಯಕ್ಕೆ ಜಾನುವಾರುಗಳ ಬಳಕೆಯೇ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಈ ನಿರ್ಧಾರದಿಂದ ವೃದ್ಧಾಶ್ರಮಗಳಂತೆ ಪಂಚಾಯ್ತಿಗೊಂದು ಗೋಶಾಲೆ ತೆರೆಯಬೇಕಾಗುತ್ತದೆ ಎಂದು ಟೀಕಿಸಿದರು.

ಜಾನುವಾರುಗಳ ಸಾಕಣೆ ವೆಚ್ಚ ಹೆಚ್ಚಾಗುತ್ತಿದೆ. ಇಂತಹ ದಿನಗಳಲ್ಲಿ ಹಸುವಿಗೆ ಮೂಗುದಾರ ಹಾಕಬೇಡಿ, ಹಣೆಪಟ್ಟಿ ಕಟ್ಟಬೇಡಿ, ಕೋಡು ಒರೆಯಬೇಡಿ, ಕಿಚ್ಚು ಹಾಯಿಸಬೇಡಿ ಎಂದು ನಿಯಮಾವಳಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಜಾನುವಾರುಗಳಿಗೆ ಕಿಚ್ಚು ಹಾಯಿಸುವುದರ ಹಿಂದೆ ವೈಜಾnನಿಕ ಕಾರಣವೂ ಇದೆ, ಜತೆಗೆ ಅದು ಹಿಂದೂ ಸಂಪ್ರದಾಯ ಕೂಡ. ಅದನ್ನೇ ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

Advertisement

ಮೋದಿ ಸರ್ಕಾರ 3 ವರ್ಷಗಳ ತನ್ನ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ಜನರನ್ನು ಭಾವನಾತ್ಮಕವಾಗಿ ಮರಳು ಮಾಡಲು ಈ ನಿಯಮಾವಳಿ ಮಾಡಿದೆ. ಕೇಂದ್ರದ ಈ ನಿರ್ಧಾರದಿಂದ ಮಾಂಸೋದ್ಯಮ ಮತ್ತು ಚರ್ಮೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳಲಿದೆ.

ಒಂದು ಜಾನುವಾರು ಸಾಕಲು ತಿಂಗಳಿಗೆ ಕನಿಷ್ಠ 2 ಸಾವಿರ ರೂ. ಬೇಕು. ಅಷ್ಟು ಹಣ ವೆಚ್ಚ ಮಾಡಲಾಗದವರು ಜಾನುವಾರುಗಳನ್ನು ರೋಡಿಗೆ ಬಿಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಇದು ನಿಜವಾಗಿ ಜಾನುವಾರುಗಳ ಸಗಣಿ ಎತ್ತುವವರ ಮಾತು ಕೇಳಿ ನಿಯಮಾವಳಿ ಮಾಡಿಲ್ಲ. ಕೇವಲ ಹಾಲು ಕುಡಿಯುವವರ ಮಾತು ಕೇಳಿ ಮಾಡಿದಂತಿದೆ ಎಂದು ದೂಷಿಸಿದರು.

ರಾಜಕೀಯ ಪ್ರೇರಿತ ಹೇಳಿಕೆ
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಗಳೊಳಗೆ ರೈತರ ಸಹಕಾರಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿರುವುದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಸಚಿವ ಎ.ಮಂಜು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಎಲ್ಲಾ ಸಾಲ ಮನ್ನಾ ಆಗಬೇಕು.

ಅದಕ್ಕಾಗಿ ಶೇ.50ರಷ್ಟು ಪಾಲು ಭರಿಸಲು ಸಿದ್ಧ ಎನ್ನುವಾಗ, ಬಿಜೆಪಿಯವರಿಗೆ ನಿಜವಾಗಿ ರೈತಪರ ಕಾಳಜಿ ಇದ್ದಲ್ಲಿ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ ಸೇರಿದಂತೆ ಎಲ್ಲ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು. ಯುಪಿಎ ಸರ್ಕಾರ ಹಿಂದೆ 76 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿತ್ತು. ಕೇಂದ್ರ ಸರ್ಕಾರ ಅದನ್ನು ಅನುಸರಿಸಿದರೆ ಸಾಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next