Advertisement
ಬ್ರಿಟಿಷರಿಗೆ ರಂಗದ ಮೇಲಿಂದಲೇ ಚಳ್ಳೆಹಣ್ಣು ತಿನ್ನಿಸಿದ ಅವರ ಚಾಕಚಕ್ಯತೆಗೆ ಸ್ವಾತಂತ್ರ ಚಳವಳಿಯ ಮುಂಚೂಣಿ ನಾಯಕರು ಸೆಲ್ಯೂಟ್ ಎಂದಿದ್ದರು. ಅವರು ಬೇರೆ ಯಾರೂ ಅಲ್ಲ. ಭರ್ತಿ 104 ವರ್ಷಗಳ ಲ ಬದುಕಿ, 85 ವರ್ಷ ಕನ್ನಡ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಕಾಯಕ ಯೋಗಿ, ನಾಡೋಜ ನಟ ಸಾಮ್ರಾಟ ಏಣಗಿ ಬಾಳಪ್ಪನವರು.
Related Articles
Advertisement
ಜಾತಿ, ಧರ್ಮದ ಸೊಂಕು ಅವರಿಗೆ ಸೋಕಿರಲೇ ಇಲ್ಲ. ಧಾರವಾಡದಲ್ಲಿ ಕರೆದವರ ಮನೆಗೆಲ್ಲ ಶರಣರಂತೆ ಹಣೆಗೆ ವಿಭೂತಿ ಹಚ್ಚಿಕೊಂಡು ಹೊರಟು ಬಿಡುತ್ತಿದ್ದರು. ಆಧುನಿಕ ರಂಗಭೂಮಿಯ ಸಾಧ್ಯತೆಗಳ ಕುರಿತು ರಂಗಕರ್ಮಿಗಳಾದ ಡಾ|ಶಿವಾನಂದ ಶೆಟ್ಟರ್, ಡಾ| ಪ್ರಕಾಶ ಗರೂಡ, ಅರವಿಂದ ಕುಲಕರ್ಣಿ, ಡಾ| ಶಶಿಧರ್ ನರೇಂದ್ರ, ಕೆ.ಜಗುಚಂದ್ರ ಸೇರಿದಂತೆ ಅನೇಕರೊಂದಿಗೆ ಸದಾ ಚರ್ಚಿಸುತ್ತಿದ್ದರು.
ವೃತ್ತಿ- ಹವ್ಯಾಸಿ ಒಂದೇ: ರಂಗ ಚಟುವಟಿಕೆಗಳಿಂದ ದಶಕದ ಕಾಲ ದೂರವಿದ್ದ ಅವರು, 1993ರಲ್ಲಿ ಧಾರವಾಡದಲ್ಲಿ ಮ್ಯಾಳ ಸಂಘದ ಮೂಲಕ ಮತ್ತೆ ರಂಗಭೂಮಿಯತ್ತ ಮುಖ ಮಾಡಿದರು. ವಿಶ್ವಚೇತನ ತಂಡಕಟ್ಟಿದರು, ಹೇಮರಡ್ಡಿ ಮಲ್ಲಮ್ಮ, ಸತ್ಯಹರಿಶ್ಚಂದ್ರದಂತಹ ನಾಟಕಗಳನ್ನು ಹೊಸ ತಲೆಮಾರಿಗೆ ಕಲಿಸಿಕೊಟ್ಟರು. ವೃತ್ತಿ ರಂಗಭೂಮಿಯ ಅತಿರೇಕಗಳು, ಹವ್ಯಾಸಿಗಳ ಕೊರತೆಗಳು ಎರಡೂ ಸರಿ ಹೋಗಬೇಕು ಎನ್ನುತ್ತಿದ್ದರು ಬಾಳಪ್ಪನವರು.
ರಂಗಭೂಮಿಯನ್ನು ಪ್ರಯೋಗ ಶೀಲತೆಗೆ ಒಳಪಡಿಸುವ, ಚಲನಶೀಲವಾಗಿಟ್ಟುಕೊಳ್ಳುವ ಬಗ್ಗೆ ತಾಸುಗಟ್ಟಲೇ ಧಾರವಾಡದ ಬುದ್ಧಿಜೀವಿ ಗಳೊಂದಿಗೆ ಮಾತನಾಡುತ್ತಿದ್ದರು. ವೃತ್ತಿ ಮತ್ತು ಹವ್ಯಾಸಿ ಎಂಬ ಭೇದವಿಲ್ಲದೇ ಎರಡನ್ನೂ ಒಟ್ಟಾಗಿ ನೋಡುವ ಅವರ ಹೊಸ ಪರಿಕಲ್ಪನೆಯೇ ಅವರ ಚಲನಶೀಲತೆಗೆ ಸಾಕ್ಷಿಯಾಗಿತ್ತು. ಕವಿವಿ ಅವರಿಗೆ ಗೌರವ ಡಾಕ್ಟರೆಟ್ ಪದವಿ ನೀಡಿ ಗೌರವಿಸಿತು.
* ಬಸವರಾಜ ಹೊಂಗಲ್