ಜೆರುಸಲೇಂ: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಪ್ರಾಚೀನ ನಗರ ಎಂದೇ ಖ್ಯಾತಿ ಪಡೆದ ಜೆರುಸಲೇಂಗೆ ಭೇಟಿ ನೀಡಿದ್ದ ವೇಳೆ ಇಸ್ರೇಲ್ ಭದ್ರತಾ ಪಡೆಗಳ ವಿರುದ್ಧ ಕೆಂಡಾಮಂಡಲರಾದ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಜೆರುಸಲೇಂನ ಲಯನ್ಸ್ ಗೇಟ್ ಸಮೀಪ ಇರುವ ಫ್ರೆಂಚ್ ರೋಮನ್ ಕ್ಯಾಥೋಲಿಕ್ ಚರ್ಚ್ ಸೈಂಟ್ ಅನ್ನೆಗೆ ಭೇಟಿ ನೀಡಲು ಮ್ಯಾಕ್ರಾನಿ ತೆರಳಿದ್ದ ವೇಳೆ ಇಸ್ರೇಲ್ ಪೊಲೀಸ್ ಹಾಗೂ ದೇಶಿ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದ ಪರಿಣಾಮ ಜಗಳ ಆರಂಭವಾಗಿತ್ತು. ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ಈ ಚರ್ಚ್ ಫ್ರಾನ್ಸ್ ಆಡಳಿತಕ್ಕೆ ಒಳಪಟ್ಟಿರುವುದಾಗಿ ವರದಿ ತಿಳಿಸಿದೆ.
“ಎಲ್ಲರಿಗೂ ಕಾನೂನು ಗೊತ್ತಿದೆ. ನೀವು (ಇಸ್ರೇಲ್ ಭದ್ರತಾ ಪಡೆ) ನನ್ನ ಸಮ್ಮುಖದಲ್ಲಿ ನಡೆದುಕೊಂಡ ರೀತಿಯ ಸರಿಯಲ್ಲ. ಇಲ್ಲಿಂದ ಹೊರಹೋಗಿ ನೀವು ಎಂದು ಮ್ಯಾಕ್ರಾನ್ ಆಕ್ರೋಶಿತರಾಗಿ ಇಸ್ರೇಲ್ ಭದ್ರತಾ ಪಡೆಗಳ ವಿರುದ್ಧ ಹರಿಹಾಯ್ದಿರುವುದಾಗಿ ವರದಿ ವಿವರಿಸಿದೆ.
ಹೊರ ಹೋಗಿ…ದಯವಿಟ್ಟು ಹೊರಹೋಗಿ..ಎಂದು ಏರು ಧ್ವನಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ ಎಂದು ವರದಿ ತಿಳಿಸಿದೆ.
1996ರಲ್ಲಿಯೂ ಅಂದಿನ ಅಧ್ಯಕ್ಷ ದಿ.ಜಾಕಸ್ ಚಿರಾಕ್ ಇಸ್ರೇಲ್ ನಲ್ಲಿರುವ ಕ್ಯಾಥೋಲಿಕ್ ಚರ್ಚ್ ಗೆ ಭೇಟಿ ನೀಡಿದ್ದ ವೇಳೆ ಇಸ್ರೇಲ್ ಭದ್ರತಾ ಪಡೆಗಳ ವಿರುದ್ಧ ಹರಿಹಾಯ್ದಿದ್ದರು. ಅಂದು ಇಸ್ರೇಲ್ ಪಡೆಗಳು ಹೊರ ಹೋಗದೆ ಚರ್ಚ್ ಒಳಗೆ ಪ್ರವೇಶಿಸುವುದಿಲ್ಲ ಎಂದು ಜಾಕಸ್ ಕಿಡಿಕಾರಿರುವ ಘಟನೆಯನ್ನು ನೆನಪಿಸಿರುವುದಾಗಿ ವರದಿ ತಿಳಿಸಿದೆ.