ಮಥುರಾ: ಉತ್ತರ ಪ್ರದೇಶದ ಧಾರ್ಮಿಕ ಕ್ಷೇತ್ರಗಳಲ್ಲೊಂದಾಗಿರುವ ಮಥುರಾವನ್ನು ಶ್ರೀಕೃಷ್ಣನ ಜನ್ಮಭೂಮಿ ಎಂದು ನಂಬಲಾಗಿದೆ. ಆದರೆ ಗೋರಕ್ಷಕ ಗೋಪಾ ಲನ ಹುಟ್ಟೂರಲ್ಲೇ ಗೋವುಗಳು ಅನಾಥವಾಗಿವೆ. ವಿಶೇಷವೆಂದರೆ, ಇಂಥ ಅನಾಥ ಹಸುಗಳಿಗೆ ತಾಯಿಯಾಗಿ ಬಂದ ಜರ್ಮನಿಯ ಮಹಿಳೆಯೊಬ್ಬರು 1200ಕ್ಕೂ ಹೆಚ್ಚು ಹಸುಗಳನ್ನು ರಕ್ಷಿಸಿ, ಪೋಷಿಸುತ್ತಿದ್ದಾರೆ!
ಮಥುರಾ ನಿವಾಸಿಗಳ ಪ್ರಮುಖ ಉಪ ಕಸುಬು ಹೈನುಗಾರಿಕೆ. ಆದರೆ ಹಾಲು ಕೊಡುವುದನ್ನು ನಿಲ್ಲಿಸುವ ವಯಸ್ಸಾದ ಹಸುಗಳನ್ನು ಜನ ಮುಲಾಜಿಲ್ಲದೆ ಬೀದಿಗೆ ಬಿಡುತ್ತಾರೆ. ಆದರೆ ಇಂಥ ಗೋವುಗಳ ಪಾಲಿಗೆ “ಮಾತೆ’ಯಾಗಿ ಬಂದವರು 59ರ ಹರೆಯದ ಜರ್ಮನಿಯ ಫ್ರೆಡ್ರಿಕ್ ಇರಿನಾ ಬ್ರೂನಿಂಗ್.
1978ರಲ್ಲಿ ಪ್ರವಾಸಿಯಾಗಿ ಭಾರತಕ್ಕೆ ಬಂದ ಬ್ರೂನಿಂಗ್, ಸಾಧನೆಗೆ ಮಾರ್ಗ ದರ್ಶನ ತೋರುವ “ಗುರು’ವಿನ ಹುಡು ಕಾಟ ದಲ್ಲಿ ಮಥುರಾ ತಲುಪಿ, ಅಲ್ಲೇ ನೆಲೆಸಿದರು. ಈ ವೇಳೆ ನೆರೆಮನೆಯವರ ಕೋರಿಕೆ ಮೇರೆಗೆ ಹಸು ಖರೀದಿಸಿದರು. ಜತೆಗೆ ಹಿಂದಿಯನ್ನೂ ಕಲಿತು, ಹಸುಗಳ ಕುರಿತ ಪುಸ್ತಕ ಖರೀದಿಸಿದರು. ಆದರೆ ವಯಸ್ಸಾದ ಹಸುಗಳನ್ನು ಬೀದಿಗೆ ಬಿಡುವ ಮಥುರಾ ನಿವಾಸಿಗಳ ಮನಃಸ್ಥಿತಿ ಕಂಡು ಮರುಗಿದ ಬ್ರೂನಿಂಗ್, 3,300 ಚದರ ಯಾರ್ಡ್ ಸ್ಥಳದಲ್ಲಿ “ಸುರಭಿ ಗೋಸೇವಾ ನಿಕೇತನ್’ ಎಂಬ ಗೋಶಾಲೆ ತೆರೆದರು.
ಮಥುರಾ ಜನ ಬೀದಿಗೆ ಬಿಟ್ಟ ಹಸುಗಳನ್ನೆಲ್ಲ ಶಾಲೆಗೆ ತಂದು ಸಲಹಲು ಆರಂಭಿಸಿದ ಬ್ರೂನಿ ಪ್ರಸ್ತುತ 1,200ಕ್ಕೂ ಹೆಚ್ಚು ಹಸು ಹಾಗೂ ಕರುಗಳಿಗೆ ಮೇವು, ನೀರು ಒದಗಿಸಿ ಸಾಕುತ್ತಿದ್ದಾರೆ. “ಹಸು ಗಳು ನನ್ನ ಮಕ್ಕಳಿದ್ದಂತೆ, ಅವುಗಳನ್ನು ಬೀದಿಯಲ್ಲಿ ಬಿಡಲು ಸಾಧ್ಯವೇ ಇಲ್ಲ. ಸ್ಥಳಾವಕಾಶ ಕಡಿಮೆ ಇದ್ದರೂ ಅವುಗ ಳನ್ನು ಕರೆತಂದು ಸಾಕುತ್ತಿದ್ದೇನೆ’ ಎನ್ನುತ್ತಾರೆ ಬ್ರೂನಿಂಗ್.