ಬೆಂಗಳೂರು: ಸ್ಪೀಕರ್ ಅವರು 17 ಶಾಸಕರನ್ನು ಅನರ್ಹಗೊಳಿಸಿದ್ದು ಆತುರದ ತೀರ್ಮಾನ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ.ಮಧುಸೂಧನ್ ಆರೋಪಿಸಿದ್ದಾರೆ,
ಸ್ಪೀಕರ್ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಅದರಲ್ಲೂ ಶ್ರೀಮಂತ ಪಾಟೀಲ್ ಅವರ ಅರ್ಜಿಯನ್ನು ಸರಿಯಾಗಿ ವಿಚಾರಣೆ ಮಾಡದೆ ಅಮಾನವೀಯವಾಗಿ ತೀರ್ಪು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಹಜ ನ್ಯಾಯದ ತತ್ವ ಪಾಲಿಸದೆ, ಕಾರಣಗಳನ್ನು ಸರಿಯಾಗಿ ಆಲಿಸದೆ, ಸುಪ್ರೀಂಕೋರ್ಟ್ ನೀಡಿದ್ದ ಸಲಹೆಯನ್ನು ಉಲ್ಲಂಘಿಸಿದ್ದಾರೆ. ರಜಾ ದಿನದಲ್ಲಿ ಸ್ಪೀಕರ್ ಆದೇಶ ನೀಡಿರುವುದು ಸರಿಯಲ್ಲ. ಸೋಮವಾರದವರೆಗೂ ಕಾಯದೆ ಆತುರ ಪಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜಕೀಯ ಒತ್ತಡಕ್ಕೆ ಮಣಿದು ಸ್ಪೀಕರ್ ಈ ರೀತಿಯ ತೀರ್ಮಾನ ನೀಡಿದ್ದಾರೆ. ಈ ತೀರ್ಪು ಸಹಮತದಿಂದ ಕೂಡಿಲ್ಲ. ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಕದ ತಟ್ಟಲಿದ್ದಾರೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದರೂ, ತರಾತುರಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಅನರ್ಹಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದರು.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ರಾಜೀನಾಮೆಯನ್ನು ಅಂಗೀಕಾರ ಮಾಡಬೇಕಿತ್ತು. ಆದರೆ, ಅನರ್ಹಗೊಳಿಸಿರುವುದು ಸಂವಿಧಾನ ಬಾಹಿರವಾಗಿದೆ. ಶನಿವಾರ, ಭಾನುವಾರ ತಾವು ಕೆಲಸ ಮಾಡುವುದಿಲ್ಲ ಎಂದು ಸ್ಪೀಕರ್ ಈ ಹಿಂದೆ ಹೇಳಿದ್ದು, ಈಗ ಭಾನುವಾರವೇ ತೀರ್ಪು ನೀಡಿದ್ದಾರೆ. ಇದು ತರಾತುರಿಯ ನಿರ್ಧಾರ ಎಂದು ದೂರಿದರು.