ನವದೆಹಲಿ: ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಯಾವುದೇ ಕಾರಣ ನೀಡದೆ ಹಿಂದೆ ಸರಿದಿದ್ದಾರೆ. ಗೋ ಫಸ್ಟ್‌ಗೆ ಗುತ್ತಿಗೆ ನೀಡಿರುವ ತಮ್ಮ ವಿಮಾನಗಳನ್ನು ಬಿಡುಗಡೆಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮಾಲೀಕರು ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆಯಿಂದಲೇ ನ್ಯಾಯಮೂರ್ತಿ ಹಿಂದೆ ಸರಿದಿರುವುದು.
ಗೋ ಫಸ್ಟ್ ಸಂಸ್ಥೆ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿರುವ ವಿಮಾನಗಳ ಗುತ್ತಿಗೆ ನೋಂದಣಿಯನ್ನು ರದ್ದುಗೊಳಿಸುವಂತೆ ಡಿಜಿಸಿಎಗೆ ನಿರ್ದೇಶನ ನೀಡಬೇಕೆಂದು ಆ್ಯಕ್ಸಿಪಿಟರ್ ಇನ್ವೆಸ್ಟ್‌ಮೆಂಟ್ಸ್, ಇಒಎಸ್ ಏವಿಯೇಷನ್, ಪೆಮ್‌ಬ್ರೋಕ್ ಹಾಗೂ ಎಸ್‌ಎಮ್‌ಬಿಸಿ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದರು. ಆದರೆ ಗುರುವಾರ ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ, ಶುಕ್ರವಾರ ವಿಚಾರಣೆಯನ್ನು ಮತ್ತೂಬ್ಬ ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖೀಸುವಂತೆ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಮಾಡಿದ್ದಾರೆ.