ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಗಳು ಹಣ ದ್ವಿಗುಣ ಗೊಳಿಸುವುದಾಗಿ ಹಾಗೂ ವಂಚನೆಗೊಳಗಾದ ಹಣ ವಾಪಸ್ ಕೊಡಿಸುವುದಾಗಿ ಯುವತಿಯೊಬ್ಬರ ಖಾತೆಯಿಂದ ಲಕ್ಷಾಂತರ ರೂ. ದೋಚಿದ್ದಾರೆ.
ಈ ಸಂಬಂಧ ಕೆಂಪೇಗೌಡ ನಗರ ನಿವಾಸಿ ಸಹನಾ (21) ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್‌ಸ್ಟ್ರಾಗ್ರಾಂ ಖಾತೆ ಹೊಂದಿರುವ ಸಹನಾಗೆ ಭಾರತ್ ಭೂಷಣ್, ಪವಿತ್ರಾಗೌಡ ಎಂಬುವವರು ಪರಿಚಯವಾಗಿದ್ದಾರೆ. ದೂರುದಾರರ ಜತೆ ಚಾಟಿಂಗ್ ಮಾಡುತ್ತಿದ್ದ ಇಬ್ಬರೂ ಆಕೆಯ ಹಿನ್ನೆಲೆ ತಿಳಿದುಕೊಂಡಿದ್ದರು. ನಿಮ್ಮ ಬಳಿ ಇರುವ ಹಣವನ್ನು ಕೆಲ ದಿನಗಳಲ್ಲೇ ದ್ವಿಗುಣಗೊಳಿಸುತ್ತೇವೆ ಎಂದು ನಂಬಿಸಿದ್ದರು. ಅವರ ಮಾತು ನಂಬಿದ ಸಹನಾ, ಅವರು ಕೇಳಿದ ತನ್ನ ಎಟಿಎಂ ಕಾರ್ಡ್‌ನ ಪಾಸ್‌ವರ್ಡ್ ಕೊಟ್ಟಿದ್ದರು. ನಂತರ ಕೆಲ ಹೊತ್ತಿನ ಬಳಿಕ ಮೊಬೈಲ್‌ಗೆ ಬಂದಿರುವ ಓಟಿಪಿ ನಂಬರ್‌ನ್ನು ಆಕೆಯಿಂದಲೇ ಪಡೆದುಕೊಂಡಿದ್ದಾರೆ. ಬಳಿಕ ಸಹನಾರ ಬ್ಯಾಂಕ್ ಖಾತೆಯಲ್ಲಿದ್ದ 1.67 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 7 ಲ್ಯಾಪ್‌ಟಾಪ್, 7 ಮೊಬೈಲ್‌ಗಳಿದ್ದ ಬ್ಯಾಗ್ ಬಿಟ್ಟು ಪರಾರಿಯಾಗಿದ್ದ ಪ್ರಯಾಣಿಕ
ಮತ್ತೊಮ್ಮೆ ವಂಚನೆ!: ಈ ಘಟನೆಯ ಕೆಲ ದಿನಗಳ ಬಳಿಕ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ಮಂಜುನಾಥ್ ಎಂಬಾತನ ಬಳಿ ತನಗಾದ ವಂಚನೆ ಬಗ್ಗೆ ಹೇಳಿಕೊಂಡಿದ್ದಾರೆ. ಆಕೆಯ ವೈಫಲ್ಯವನ್ನು ಕಂಡ ಆರೋಪಿ, ಹಣ ವಾಪಸ್ ಕೊಡಿಸುತ್ತೇನೆ ಎಂದು ಆಕೆಯ ಎಟಿಂ ಕಾರ್ಡ್‌ನ ಪಾಸ್‌ವರ್ಡ್ ಹಾಗೂ ಇತರೆ ಮಾಹಿತಿ ಪಡೆದುಕೊಂಡು 94,546 ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಮೂಲಕ ಸಹನಾಗೆ ಆರೋಪಿಗಳು 2.61 ಲಕ್ಷ ರೂ. ವಂಚಿಸಿದ್ದಾರೆ ಎಂದು ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.