Advertisement

ಸರ್ಕಾರದ ಕ್ರಮಗಳ ಬಗ್ಗೆ ವಿಶ್ವ ಸಮುದಾಯಕ್ಕೆ ವಿವರಿಸಿ

12:30 AM Mar 02, 2019 | |

ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಹೊಂದಿದ್ದ ಶಿಬಿರಗಳ ಮೇಲೆ ಯಾವ ಕಾರಣಕ್ಕಾಗಿ ಐಎಎಫ್ ವಿಮಾನಗಳ ಮೂಲಕ ದಾಳಿ ನಡೆಸಲಾಯಿತು ಎಂಬ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿವರಿಸಿ ಎಂದು ಕೇಂದ್ರ ಸರ್ಕಾರಕ್ಕೆ ವಿದೇಶಾಂಗ ವ್ಯವಹಾರಗಳಿಗಾಗಿನ ಸಂಸತ್‌ನ ಸ್ಥಾಯಿ ಸಮಿತಿ ಸೂಚಿಸಿದೆ.

Advertisement

ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಶುಕ್ರವಾರ ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಫೆ.14ರ ಘಟನೆಯ ಬಳಿಕ ಉಂಟಾಗಿರುವ ವಿದ್ಯಮಾನಗಳನ್ನು ವಿವರಿಸಿದ್ದಾರೆ. ಪಾಕಿಸ್ತಾನ ವಾಯುಪಡೆಯು ದೇಶದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಪ್ರಯತ್ನವನ್ನು ಹಿಮ್ಮೆಟ್ಟಿಸಿದ ಬಗ್ಗೆಯೂ ಸಮಿತಿಗೆ ವಿದೇಶಾಂಗ ಕಾರ್ಯದರ್ಶಿ ವಿವರಣೆ ನೀಡಿದ್ದಾರೆ. ಸರ್ಕಾರ ಮತ್ತು ಯೋಧರು ಕೈಗೊಂಡ ಕ್ರಮಗಳ ಬಗ್ಗೆ ಸ್ಥಾಯಿ ಸಮಿತಿಯು ಮೆಚ್ಚುಗೆ ಸೂಚಿಸಿದೆ.

ಜತೆಗೆ, ವೈಮಾನಿಕ ದಾಳಿಯ ಕುರಿತು ಹಾಗೂ ಆ ದಾಳಿಯಿಂದ ಉಗ್ರ ಸಂಘಟನೆ ಜೆಇಎಂಗಾದ ಹಾನಿ, ಸಾವು-ನೋವು ಮತ್ತಿತರ ಸಂಪೂರ್ಣ ವಿವರವನ್ನು ವಿಶ್ವ ಸಮುದಾಯಕ್ಕೆ ತಲುಪಿಸಿ. ಆಗ, ಯಾವ ಅಂತಾರಾಷ್ಟ್ರೀಯ ಸಂಸ್ಥೆಯೂ ದಾಳಿಯ ಪರಿಣಾಮಗಳ ಬಗ್ಗೆ ಪ್ರಶ್ನೆಯೆತ್ತುವ ಸಂದರ್ಭ ಮೂಡುವುದಿಲ್ಲ ಎಂದು ಸಮಿತಿ ವಿದೇಶಾಂಗ ಕಾರ್ಯದರ್ಶಿಗೆ ಸೂಚಿಸಿದೆ.

ಪಾಕ್‌ನಿಂದ ಆಂಶಿಕ ವಿಮಾನ ಹಾರಾಟ ಶುರು
ಭಾರತದ ಜತೆಗಿನ ಬಿಗುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ಸ್ಥಗಿತಕ್ಕೆ ಒಳಗಾಗಿದ್ದ ವಿಮಾನ ಸಂಚಾರ ಪಾಕಿಸ್ತಾ ನದಲ್ಲಿ ಆಂಶಿಕವಾಗಿ ಶುರುವಾಗಿದೆ. ಇಸ್ಲಾಮಾಬಾದ್‌, ಕರಾಚಿ, ಪೇಶಾವರ ಮತ್ತು ಕ್ವೆಟ್ಟಾ ವಿಮಾನ ನಿಲ್ದಾಣಗಳಿಂದ ಸಂಚಾರ ಶುರುವಾಗಿದೆ. ಪೂರ್ವ ಭಾಗದ ಏರ್‌ಪೋರ್ಟ್‌ಗಳಾಗಿರುವ ಲಾಹೋರ್‌, ಮುಲ್ತಾನ್‌, ಸಿಯಾಲ್‌ಕೋಟ್‌, ಫೈಸಲಾಬಾದ್‌ ಮತ್ತು ಭವಾಲ್ಪುರಗಳಿಂದ ಮಾ.4ರ ವರೆಗೆ ವಿಮಾನ ಸಂಚಾರ  ರದ್ದುಗೊಳಿಸ ಲಾಗಿದೆ. ಹಾರಾಟ ಸಂಚಾರದಿಂದಾಗಿ 700ಕ್ಕೂ ಹೆಚ್ಚು ದೇಶಿಯ ಮತ್ತು ಅಂತಾರಾಷ್ಟ್ರೀಯ ಯಾನಕ್ಕೆ ಅಡ್ಡಿಯಾಗಿದೆ.

ಮಸೂದ್‌ ನಮ್ಮಲ್ಲೇ ಇದ್ದಾನೆಂದು ಒಪ್ಪಿಕೊಂಡ ಪಾಕ್‌ ಸಚಿವ
ಪುಲ್ವಾಮಾ ದಾಳಿ ನಡೆಸಿದ ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹೂದ್‌ ಖುರೇಶಿ ಒಪ್ಪಿಕೊಂಡಿದ್ದಾರೆ. ಆದರೆ ಆತ ಅನಾರೋಗ್ಯ ಪೀಡಿತನಾಗಿದ್ದಾನೆ. ಆತ ತನ್ನ ಮನೆಯಿಂದ ಹೊರಹೋಗಲೂ ಸಾಧ್ಯವಾಗುತ್ತಿಲ್ಲ ಎಂದು ಸಿಎನ್‌ಎನ್‌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಖುರೇಷಿ ತಿಳಿಸಿದ್ದಾರೆ. ಆದರೆ ಭಾರತ ಪದೇ ಪದೆ ಮಸೂದ್‌ ಅಜರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರುತ್ತಿದ್ದರೂ, ಯಾಕೆ ಆತನನ್ನು ಬಂಧಿಸುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಸೂಕ್ತ ಸಾಕ್ಷ್ಯ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಭಾರತ ನೀಡುವ ಸಾಕ್ಷ್ಯಗಳು ಸೂಕ್ತವಾಗಿರಬೇಕು ಹಾಗೂ ಒಪ್ಪುವಂಥದ್ದಾಗಿರಬೇಕು. ಇದನ್ನು ನಾವು ನ್ಯಾಯಾಲಯದ ಮುಂದೆ ಇಡುತ್ತೇವೆ. ಕೋರ್ಟ್‌ ಒಪ್ಪಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.  ಇದೇ ವೇಳೆ, ಎರಡೂ ದೇಶಗಳ ನಡುವೆ ಶಾಂತಿ ಮೂಡಿಸುವ ಉದ್ದೇಶದಿಂದ  ಅಭಿನಂದನ್‌ರನ್ನು ಬಿಡುಗಡೆ ಮಾಡುತ್ತಿದ್ದೇವೆ ಮತ್ತು ಇದನ್ನು ಸಮಸ್ಯೆ ಪರಿಹಾರದ ವಿಚಾರದಲ್ಲಿ ಪಾಕಿಸ್ತಾನದ ಸಮ್ಮತಿ ಎಂದು ಪರಿಗಣಿಸಬೇಕು ಎಂದಿದ್ದಾರೆ.

Advertisement

ಅಣ್ವಸ್ತ್ರ ರಾಷ್ಟ್ರಗಳೆಂದು ಭಾರತ, ಪಾಕ್‌ಗಳಿಗೆ ಮಾನ್ಯತೆ ನೀಡಿಲ್ಲ
ಭಾರತ ಮತ್ತು ಪಾಕಿಸ್ತಾನಗಳು ಅಣ್ವಸ್ತ್ರಗಳನ್ನು ಹೊಂದಿದ್ದರೂ ಅವುಗಳಿಗೆ ತಾನು “ಪರಮಾಣು ರಾಷ್ಟ್ರ’ಗಳು ಎಂದು ಮಾನ್ಯ ಮಾಡಿಲ್ಲ ಎಂದು ಚೀನಾ ಹೇಳಿದೆ. ಬೀಜಿಂಗ್‌ನಲ್ಲಿ ಶುಕ್ರವಾರ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್‌ ಅಮೆರಿಕ ಜತೆಗಿನ ಮಾತುಕತೆ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಭಾರತ-ಪಾಕ್‌ಗೆ ಪರಮಾಣು ರಾಷ್ಟ್ರಗಳೆಂದು ಮಾನ್ಯತೆ ನೀಡಿರುವಂತೆ ಉತ್ತರ ಕೊರಿಯಾಕ್ಕೂ ನೀಡಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಕಾಂಗ್‌ ಪ್ರತಿಕ್ರಿಯೆ ನೀಡಿ, ಉತ್ತರ ಕೊರಿಯಾಕ್ಕೆ ಪರಮಾಣು ರಾಷ್ಟ್ರ ಎಂದು ಮಾನ್ಯತೆ ನೀಡಲಾಗದು. ಜತೆಗೆ ಭಾರತ ಮತ್ತು ಪಾಕಿಸ್ತಾನವನ್ನೂ ನಾವು ಅಣ್ವಸ್ತ್ರ ರಾಷ್ಟ್ರಗಳೆಂದು ಪರಿಗಣಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪರಮಾಣು ಇಂಧನ ಪೂರೈಕೆ ರಾಷ್ಟ್ರಗಳ ಸದಸ್ಯತ್ವಕ್ಕೆ ಭಾರತ ಅರ್ಜಿ ಸಲ್ಲಿಕೆ ಮಾಡಿದ್ದರೂ, ಚೀನಾ ಅದನ್ನು ಬೆಂಬಲಿಸುತ್ತಿಲ್ಲ. ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಚೀನಾವು ಪಾಕಿಸ್ತಾನಕ್ಕೆ ತೆರಳುವ ಮತ್ತು ಆಗಮಿಸುವ ವಿಮಾನಗಳ ಹಾರಾಟ ನಿಷೇಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next