ಪಣಜಿ: ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಗೋವಾ ಬಾಂಬೋಲಿಂ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಸಾವನ್ನಪ್ಪಲು ಆಕ್ಸಿಜನ್ ಸಮರ್ಪಕ ಪೂರೈಕೆಯಿಲ್ಲದಿರುವುದೇ ಕಾರಣ ಎಂಬುದನ್ನು ಸರ್ಕಾರ ಈ ಹಿಂದೆ ತಳ್ಳಿ ಹಾಕಿತ್ತು. ಆದರೆ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗೋವಾದ ಸಂಚಾಲಕ ಡಾ. ಬಿ.ಕೆ. ಮಿಶ್ರಾ ರವರ ನೇತೃತ್ವದಲ್ಲಿ ತ್ರಿ ಸದಸ್ಯ ಸಮಿತಿಯು ರಾಜ್ಯದಲ್ಲಿ ಆಕ್ಸಿಜನ್ ಕೊರತೆಯೇ ಕೋವಿಡ್ ಸೋಂಕಿತರು ಸಾವನ್ನಪ್ಪಲು ಕಾರಣ ಎಂಬುದನ್ನು ತನ್ನ ತನಿಖಾ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಇದರಿಂದಾಗಿ ರಾಜ್ಯದಲ್ಲಿ ಸಾವಿರಾರು ಜನರು ಕೋವಿಡ್ ಸೋಂಕಿತರು ಆಕ್ಸಿಜನ್ ಪೂರೈಕೆಯಿಲ್ಲದೆಯೇ ಸಾವನ್ನಪ್ಪಿರುವುದು ಸ್ಪಷ್ಟವಾದಂತಾಗಿದೆ.
ಗೋವಾ ವೈದ್ಯಕೀಯ ವಿದ್ಯಾಲಯದ ಡಾ.ವಿ.ಎನ್.ಜಿಂದಾಲ ಹಾಗೂ ಸಂಜಯ ಕುಮಾರ್ ಇವರು ಈ ಸಮೀತಿಯ ಇತರ ಸದಸ್ಯರಾಗಿದ್ದಾರೆ. ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಪ್ರತಿದಿನ ಬೆಳಗಿನ ಜಾವ 2 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದರು. ಈ ಅವಧಿಯನ್ನು “ಕಪ್ಪು ಸಮಯ” ಎಂದೇ ಕರೆಯಲಾಗಿತ್ತು. ಆದರೆ ಆಕ್ಸಿಜನ್ ಕೊರತೆಯಿಂದಾಗಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಕಳೆದ ಮೇ 7 ರಿಂದ 16 ರವರೆಗೆ ಗೋವಾದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 75 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ವಿಷಯವು ದೇಶಾದ್ಯಂತ ಚರ್ಚೆಗೂ ಕಾರಣವಾಗಿತ್ತು. ಇಷ್ಟೇ ಅಲ್ಲದೆಯೇ ಮೇ 7 ರಂದು ಗೋವಾದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಹೆಚ್ಚಿನ ಜನರು ಸಾವನ್ನಪ್ಪಿದ್ದರು. ಪುಟ್ಟ ರಾಜ್ಯ ಗೋವಾದಲ್ಲಿ ಅಂದು ಹೆಚ್ಚಿನ ಜನರು ಜೀವ ಕಳೆದುಕೊಂಡಿದ್ದರು. ಅಂದು ಗೋವಾದಲ್ಲಿ ಪೋಜಿಟಿವಿಟಿ ದರವು ಶೇ 51 ಕ್ಕೆ ತಲುಪಿತ್ತು. ಇದರಿಂದಾಗಿ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.