Advertisement
ಜಾಗತಿಕ ಕಾರ್ಯವಿಧಾನವಾಗಿ ತುರ್ತು ವೈದ್ಯಕೀಯ
ಆರೈಕೆಯ ವಿಕಸನ
ತುರ್ತು ವೈದ್ಯಕೀಯ ಆರೈಕೆ ಅಥವಾ ಎಮರ್ಜೆನ್ಸಿ ಮೆಡಿಸಿನ್ ಕೇರ್ ಅನ್ನುವುದು ವೈದ್ಯಕೀಯ ಸೇವೆಯಷ್ಟೇ ಹಳೆಯ ಸಂಗತಿ. ಆದರೆ ತುರ್ತು ಆರೈಕೆ ವಿಭಾಗ ಮತ್ತು ತುರ್ತು ಆರೈಕೆಯನ್ನು ಒದಗಿಸುವ ಬಗೆಗಿನ ಸಮಗ್ರ ವ್ಯವಸ್ಥೆಗಳ ಅಭಿವೃದ್ಧಿಯ ವಿಚಾರ ಮಾತ್ರ ಇತ್ತೀಚಿನದು. 1960ಕ್ಕೆ ಮೊದಲು, ಜಗತ್ತಿನಾದ್ಯಂತ ತುರ್ತು ವೈದ್ಯಕೀಯ ಆರೈಕೆ ಅನ್ನುವುದು ವೈದ್ಯಕೀಯ ಆರೈಕೆಯನ್ನು ಒದಗಿಸುವ ಸರಪಣಿಯ ದುರ್ಬಲ ಕೊಂಡಿಯಾಗಿತ್ತು. ಹಿಂದೆ ತುರ್ತು ಆರೈಕೆಯನ್ನು ಒದಗಿಸುವ ವೈದ್ಯರಿಗೆ ಮತ್ತು ದಾದಿಯರಿಗೆ ಯಾವುದೇ ರೀತಿಯ ನಿರ್ದಿಷ್ಟ ತರಬೇತಿ ಯೋಜನೆಗಳು ಇದ್ದಿರಲಿಲ್ಲ. ವಿಶೇಷ ಗುಣಮಟ್ಟದ ತುರ್ತು ಆರೈಕೆಯನ್ನು ಒದಗಿಸುವುದಕ್ಕಾಗಿ ಮೀಸಲಾದ, ವೈಜಾnನಿಕವಾಗಿ ಹಾಗೂ ಕಲಾತ್ಮಕ ಗುಣಮಟ್ಟದ ಸೇವಾ ಸಂಸ್ಥೆಗಳು ಇರಲಿಲ್ಲ ಮತ್ತು ವೈದ್ಯರ ವಿಶೇಷ ತಜ್ಞತೆ ಅಥವಾ ತರಬೇತಿಯ ಮಟ್ಟವನ್ನು ಗಮನಿಸದೆಯೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಸಿಬಂದಿಗಳನ್ನು ನಿಯೋಜಿಸುವ ಜವಾಬ್ದಾರಿಯನ್ನು ವೈದ್ಯರಿಗೆ ವಹಿಸಲಾಗುತ್ತಿತ್ತು.
Related Articles
ವಿವಿಧ ಹಂತಗಳು ಮತ್ತು
ಆರೈಕೆಯ ನೀಡುವ ವಿಧಾನ:
ಸೂಕ್ಷ್ಮ ವೈದ್ಯಕೀಯ ನಿರ್ಧಾರಣೆ ಮತ್ತು ಸಮಯ-ಅಮೂಲ್ಯವೆನಿಸುವ ಪರಿಸ್ಥಿತಿಯಲ್ಲಿ (ಅಂದರೆ ಇಂತಿಷ್ಟು ಸಮಯದೊಳಗೆ ಚಿಕಿತ್ಸೆ ಸಿಕ್ಕರೆ ರೋಗಿಯನ್ನು ಮರಣ ಅಥವಾ ರೋಗಸ್ಥಿತಿಯಿಂದ ಪಾರುಮಾಡಬಹುದು ಎಂಬಂತಹ ಮತ್ತು ಕ್ಷಿಪ್ರವಾಗಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ) ಅನಾವಶ್ಯಕ ಮರಣ ಮತ್ತು ವೈಕಲ್ಯವನ್ನು ತಪ್ಪಿಸುವ ಉದ್ದೇಶದ ಕಾರ್ಯಾಚರಣೆಯು, ತುರ್ತು ವೈದ್ಯಕೀಯ ಆರೈಕೆಯ ಬಹುಮುಖ್ಯ ಕಲ್ಪನೆ ಮತ್ತು ಕಾರ್ಯತಂತ್ರವಾಗಿರುತ್ತದೆ. ತುರ್ತು ವೈದ್ಯಕೀಯ ಆರೈಕೆಯ ವಿವಿಧ ಹಂತಗಳು ಅಂದರೆ: ಆರೈಕೆಯ ಲಭ್ಯತೆ, ಸಮುದಾಯದಲ್ಲಿನ ಆರೈಕೆ, ಸಾಗಾಟ ಸಮಯದ ಆರೈಕೆ ಮತ್ತು ತಲುಪಿದ ಬಳಿಕ ಆಸ್ಪತ್ರೆಯಲ್ಲಿ ಪಡೆಯುವ ಆರೈಕೆ.
Advertisement
ವೈದ್ಯಕೀಯ ಆರೈಕೆಯ ಲಭ್ಯತೆವೈದ್ಯಕೀಯ ತುರ್ತು ಸ್ಥಿತಿ ಅಂದರೆ ಇಲ್ಲಿ ಸಮಯ ಬಹಳ ಅಮೂಲ್ಯ, ಯಾಕೆಂದರೆ ರೋಗಿಯ ಸ್ಥಿತಿಯ ಗುರುತಿಸುವಿಕೆ ಮತ್ತು ಚಿಕಿತ್ಸೆಯಲ್ಲಿ ಕಾಲ ವಿಳಂಬವಾದರೆ, ರೋಗಸ್ಥಿತಿ, ಮರಣ ಅಥವಾ ವೈಕಲ್ಯದ ಸಂಭವನೀಯತೆ ಹೆಚ್ಚಾಗುತ್ತದೆ. ಹಾಗಾಗಿ ತುರ್ತು ವೈದ್ಯಕೀಯ ಆರೈಕೆಯು ಬಹಳ ಸುಲಭವಾಗಿ ಸಿಗುವಂತಾಗಬೇಕು. ಯಾವಾಗ ಮತ್ತು ಯಾಕೆ ತುರ್ತು ವೈದ್ಯಕೀಯ ಅರೈಕೆಯನ್ನು ಪಡೆಯಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ನೀಡುವ ಮೂಲಕ ತುರ್ತು ಆರೈಕೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬಹುದು ಜನ ಸಮುದಾಯಕ್ಕೆ
ತುರ್ತು ವೈದ್ಯಕೀಯ ಆರೈಕೆ
ಜನಸಾಮಾನ್ಯರಿಗೆ, ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ, ದಾದಿಯರಿಗೆ, ಪ್ರಾಥಮಿಕ ಆರೈಕೆ ನೀಡುವ ವೈದ್ಯರಿಗೆ ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ಜನ ಸಮುದಾಯಕ್ಕೆ ಪರಿಣಾಮಕಾರಿ ತುರ್ತು ವೈದ್ಯಕೀಯ ಆರೈಕೆಯನ್ನು ತಲುಪಿಸಬಹುದು. ಪ್ರಥಮ ಚಿಕಿತ್ಸೆ, ಹೃದಯ ಶ್ವಾಸಕೋಶಗಳನ್ನು ಪುನಶ್ಚೇತನಗೊಳಿಸುವುದು, ಶ್ವಾಸನಾಳದಲ್ಲಿ ಸಿಕ್ಕಿಹಾಕಿಕೊಂಡಿರುವ ಬಾಹ್ಯ ವಸ್ತುವಿನ ನಿರ್ವಹಣೆ, ಕೈಕಾಲುಗಳಿಗೆ ಗಾಯವಾಗುವ ಸಂದರ್ಭದಲ್ಲಿ ಸ್ಥಳೀಯ ಸಾಮಗ್ರಿಗಳನ್ನು ಬಳಸಿಕೊಂಡು ಬಾಹ್ಯ ರಕ್ತಸ್ರಾವವನ್ನು ಮತ್ತು ಚಲನೆಯನ್ನು ನಿಯಂತ್ರಿಸುವುದು ಮುಂತಾದವುಗಳಿಗೆ ಸಂಬಂಧಿಸಿದ ತರಬೇತಿ ಯೋಜನೆಗಳು, ಆಸ್ಪತ್ರೆಯ ವ್ಯವಸ್ಥೆ ಇಲ್ಲದಿರುವಲ್ಲಿ ತತ್‌ಕ್ಷಣದ ಆರೈಕೆಯ ಅಥವಾ ಆಸ್ಪತ್ರೆಯ ಆರೈಕೆಯು ಸಿಗುವುದಕ್ಕೆ ಮೊದಲು ಸಿಗಬಹುದಾದ ತತ್‌ಕ್ಷಣದ ಮತ್ತು ಮೂಲ ಹಂತದ ತುರ್ತು ಆರೈಕೆಯನ್ನು ಖಚಿತಪಡಿಸುತ್ತವೆ. ಸಾಗಾಟ ಸಮಯದ
ತುರ್ತು ವೈದ್ಯಕೀಯ ಆರೈಕೆ
ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಯನ್ನು ಆರೈಕೆ ನೀಡುವ ಸೌಕರ್ಯಕ್ಕೆ ಅಥವಾ ಆಸ್ಪತ್ರೆಗೆ ಸಾಗಿಸುವುದೂ ಸಹ ರೋಗಸ್ಥಿತಿ ಮತ್ತು ಮರಣವನ್ನು ತಗ್ಗಿಸುವ ಮತ್ತೂಂದು ಬಹುಮುಖ್ಯ ಅಂಶ. ಸೂಕ್ತ ಸಂಪರ್ಕ ವ್ಯವಸ್ಥೆಗಳು, ರೋಗಿಯನ್ನು ಬರಮಾಡಿಕೊಳ್ಳುವ ಆಸ್ಪತ್ರೆಯ ಆಸ್ಪತ್ರೆ-ಪೂರ್ವ ಆರೈಕೆ ನೀಡುವವರಿಗೆ ಜಾಗೃತವಾಗಿರಲು ಮತ್ತು ಸಾಗಟದ ಸಮಯದ ವೈದ್ಯಕೀಯ ಸಮಾಲೋಚನೆಗೆ ಅನುವು ಮಾಡಿಕೊಡುತ್ತದೆ. ರೋಗಿಯನ್ನು ಸೇರಿಸುವ
ಕೇಂದ್ರದ ಅಥವಾ ಆಸ್ಪತ್ರೆಯಲ್ಲಿನ
ತುರ್ತು ವೈದ್ಯಕೀಯ ಆರೈಕೆ
ಒಂದು ಬಾರಿ ರೋಗಿಯು ತುರ್ತು ನಿಗಾ ಘಟಕವನ್ನು ತಲುಪಿದ ನಂತರ, ನಿಗಾ ವ್ಯವಸ್ಥೆಯು ಮುಂದಿನ ಅಂಶಗಳನ್ನು ಒಳಗೊಂಡಿರುತ್ತದೆ: ಚಿಕಿತ್ಸೆಯ ಸರದಿ ನಿರ್ಧರಿಸುವುದು, ಪುನಃಶ್ಚೇತನಗೊಳಿಸುವುದು ಮತ್ತು ಗಾಯಾಳುವಿನ ಸ್ಥಿತಿಯನ್ನು ಸ್ಥಿರಗೊಳಿಸುವುದು; ಆರಂಭಿಕ ತಪಾಸಣೆಗಳನ್ನು ಪ್ರಾರಂಭಿಸುವುದು ಮತ್ತು ಚಿಕಿತ್ಸೆ ಆರಂಭಿಸುವುದು; ಗಮನಿಸುವುದು ಮತ್ತು ಸಮಾಲೋಚನೆ, ಪರಿಣಾಮ (ಫಲಿತಾಂಶ)ಗಳನ್ನು ಪಡೆಯುವುದು ಮತ್ತು ನೀಡುವ ಆರೈಕೆಯನ್ನು ದಾಖಲಿಸುವುದು ಮತ್ತು ಫಾಲೋ-ಅಪ್ ಕೇರ್‌ನ ಸೌಲಭ್ಯಗಳನ್ನು ಒದಗಿಸುವುದು. ಯಾರಿಗೆ ಮೊದಲು ಚಿಕಿತ್ಸೆಯನ್ನು ನೀಡಬೇಕು ಮತ್ತು ಯಾರಿಗೆ ಸ್ವಲ್ಪ ಕಾಲ ಬಿಟ್ಟು ಚಿಕಿತ್ಸೆ ನೀಡಬಹುದು ಮತ್ತು ಉಳಿದ ರೋಗಿಗಳಲ್ಲಿ ಯಾರಿಗೆ ಆದ್ಯತೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಮತ್ತು ಇರುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಹಂಚಿಕೊಡಲು ಚಿಕಿತ್ಸೆಯ ಸರದಿಯನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ಮೊದಲೆ ತಯಾರಿಸಿದ ಚಿಕಿತ್ಸಾ ಸರದಿಯ ಪಟ್ಟಿ ಇದ್ದರೆ, ತುರ್ತು ಅಗತ್ಯ ಇದ್ದವರಿಗೆ ಮೊದಲು ಚಿಕಿತ್ಸೆ ನೀಡುವ ಮೂಲಕ ಮರಣ-ಸಾಧ್ಯತೆಯನ್ನು ತಗ್ಗಿಸಬಹುದು. ಸಾಮಾನ್ಯವಾಗಿ ನುರಿತ ದಾದಿಯರು ಚಿಕಿತ್ಸಾ ಸರದಿಯ ಪಟ್ಟಿಯನ್ನು ತಯಾರಿಸುತ್ತಾರೆ. – ಮುಂದಿನ ವಾರಕ್ಕೆ ಡಾ| ಜೀಧು ರಾಧಾಕೃಷ್ಣನ್,
ಎಮರ್ಜೆನ್ಸಿ ಮೆಡಿಸಿನ್ ತಜ್ಞರು,
ಎಮರ್ಜೆನ್ಸಿ ಮೆಡಿಸಿನ್ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಮಂಗಳೂರು.