ಮೈಸೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಟೈಂಸ್ ಹೈಯರ್ ಎಜುಕೇಷನ್ ಏಜೆನ್ಸಿ ಪ್ರಕಟಿಸಿದ ಜಾಗತಿಕಮಟ್ಟದ 2019ರ್‍ಯಾಂಕಿಂಗ್ ವಿಶ್ವವಿದ್ಯಾನಿಲಯಗಳ ಶ್ರೇಣಿಯಲ್ಲಿ 401ರಿಂದ 500ರ ಮಿತಿಯೊಳಗೆ ರ್‍ಯಾಂಕ್ ಪಡೆದಿದೆ ಎಂದು ಕುಲಪತಿ ಡಾ.ಬಿ.ಸುರೇಶ್ ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಒಟ್ಟಾರೆ ಇರುವ 1258 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು 401ರಿಂದ 500ರ ಮಿತಿಯೊಳಗೆ ರ್‍ಯಾಂಕ್ ಪಡೆದಿದ್ದು, ಭಾರತದ ಒಟ್ಟು 49 ವಿಶ್ವವಿದ್ಯಾನಿಲಯಗಳ ಪೈಕಿ ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಸಂಸ್ಥೆಯು ಮೊದಲ 5 ಸ್ಥಾನಗಳಲ್ಲಿದ್ದು ಶ್ರೇಷ್ಠ ಗುಣಮಟ್ಟ ಕಾಯ್ದುಕೊಂಡಿರುವುದು ಸಂತಸ ತಂದಿದೆ ಎಂದರು.
ವೈದ್ಯಕೀಯ ಅಧ್ಯಯನ: ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯು ನಾಲ್ಕು ಘಟಕಗಳ ಕಾಲೇಜುಗಳು ಮತ್ತು ಎರಡು ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದು, ಒಟ್ಟಾರೆ 147 ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬೋಧಿಸಲಾಗುತ್ತಿದೆ. ದೇಶದ ವಿವಿಧೆಡೆಯ ಸುಮಾರು 5500 ವಿದ್ಯಾರ್ಥಿಗಳು ಅಧ್ಯಯನಶೀಲರಾಗಿದ್ದಾರೆ. ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯು ಪ್ರಮುಖವಾಗಿ ವೈದ್ಯಕೀಯ ಮತ್ತು ಆರೋಗ್ಯ ನಿಕಾಯಗಳ ಅಧ್ಯಯನದ ಬಗ್ಗೆ ಹೆಚ್ಚು ಗಮನವಹಿಸಿದೆ ಎಂದರು.
ವಿಶ್ವವಿದ್ಯಾನಿಲಯವು ಜೆಎಸ್‌ಎಸ್ ವೈದ್ಯಕೀಯ ಮಹಾ ವಿದ್ಯಾಲಯ, ಜೆಎಸ್‌ಎಸ್ ದಂತ ವೈದ್ಯಕೀಯ ಮಹಾ ವಿದ್ಯಾಲಯ, ಔಷಧ ವಿಜ್ಞಾನ ಮಹಾ ವಿದ್ಯಾಲಯ, ಮೈಸೂರು ಮತ್ತು ಊಟಿ ಇವುಗಳ ಜೊತೆಗೆ ವಿವಿ ನಡೆಸುತ್ತಿರುವ ವಾಟರ್ ಅಂಡ್ ಹೆಲ್ತ್ ವಿಭಾಗ ಮತ್ತು ಹೆಲ್ತ್ ಸಿಸ್ಟಂ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸೇರ್ಪಡೆಗೊಂಡಿವೆ. ನವೀನ ಮಾದರಿಯ ಲೈಪ್ ಸೈನ್ಸ್ ವಿಷಯಗಳನ್ನು ಬೋಧಿಸಲಾಗುತ್ತಿದೆ ಎಂದರು.
ವಿಶ್ವ ಭೂಪಟದಲ್ಲಿ ಸೇರ್ಪಡೆ: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಜಾಗತಿಕ ಭೂಪಟದಲ್ಲಿ ಸೇರಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜೆಎಸ್‌ಎಸ್ ಮಹಾ ವಿದ್ಯಾಪೀಠದ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸಿ.ಜಿ.ಬೆಟಸೂರ್ ಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಎಸ್.ಪಿ.ಶಿವಕುಮಾರಸ್ವಾಮಿ, ಪ್ರಾಂಶುಪಾಲ ಡಾ.ಬಸವನಗೌಡಪ್ಪ, ಡಾ.ಕುಶಾಲಪ್ಪ, ಡಾ.ಬಾಲಸುಬ್ರಹ್ಮಣ್ಯಂ ಇನ್ನಿತರರಿದ್ದರು.