ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇನ ನೀಡುವ ಉದ್ದೇಶದಿಂದ ಮೇ ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲರ ಸಲಹೆಗಾರ ಕೇವಲ್ ಕುಮಾರ್ ಶರ್ಮಾ ತಿಳಿಸಿದರು.
ನಗರದ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸೋಮವಾರ ನಡೆದ ಸಮಾವೇಶದ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯ ಜಮ್ಮು ಕಾಶ್ಮೀರದಲ್ಲಿ ಹೂಡಿಕೆ, ವ್ಯಾಪಾರ-ವಹಿವಾಟಿಗೆ ಮುಕ್ತ ವಾತಾವಣವಿದೆ. ಹೂಡಿಕೆಯನ್ನು ಉತ್ತೇಜಿಸುವ ಹಾಗೂ ಜಮ್ಮು ಕಾಶ್ಮೀರವನ್ನು ಕೈಗಾರಿಕಾ ಕೇಂದ್ರವನ್ನಾಗಿಸುವ ಉದ್ದೇಶಗಳಿಂದ 48 ಕ್ಕೂ ಹೆಚ್ಚು ಹೂಡಿಕೆ ಯೋಜನೆಗಳು ಮತ್ತು ಹೊಸ 14 ಉದ್ಯಮ ವಲಯವನ್ನು ಗುರುತಿಸಲಾಗಿದೆ. ಜತೆಗೆ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳನ್ನು ಆಕರ್ಷಿಸಲು ಆರು ಸಾವಿರ ಎಕರೆ ಕೈಗಾರಿಕಾ ಪ್ರದೇಶವನ್ನು ಗುರುತಿಸಲಾಗಿದೆ. ಈ ಮೂಲಕ ಹೂಡಿಕೆದಾರ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ. ಮುಂಬರುವ ಮೇನಲ್ಲಿ ಜಮ್ಮು ಕಾಶ್ಮೀರ ಜಾಗತಿಕ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಂಡವಾಳದಾರರನ್ನು ರಾಜ್ಯಕ್ಕೆ ಆಹ್ವಾನಿಸಲಾಗುವುದು ಎಂದರು.
ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಪ್ರವಾಸೋದ್ಯಮ, ಚಲನಚಿತ್ರ ಪ್ರವಾಸೋದ್ಯಮ, ತೋಟಗಾರಿಕೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ರೇಷ್ಮೆ, ಆರೋಗ್ಯ ಔಷಧೀಯ ಉತ್ಪಾದನೆ, ಐಟಿ ಉದ್ಯಮ, ಮೂಲಸೌಕರ್ಯ, ಕೈಮಗ್ಗ ಮತ್ತು ಕರಕುಶಲ ವಸ್ತುಗಳು, ಶಿಕ್ಷಣ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಇದು ಪ್ರಾದೇಶಿಕ ಆರ್ಥಿಕತೆಗೆ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ತಿಳಿಸಿದರು.
ಸಮಾವೇಶವು ಜಮ್ಮು ಕಾಶ್ಮೀರ ವ್ಯಾಪಾರ ಪ್ರಚಾರ ಸಂಸ್ಥೆ (ಜೆಕೆಟಿಪಿಒ), ಜಮ್ಮು ಕಾಶ್ಮೀರ ಸರ್ಕಾರದ ಮತ್ತು ಕಾನೆ#ಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದಲ್ಲಿ ನಡೆಯುತ್ತಿದೆ. ಟೊಯೋಟಾ, ಕಿರ್ಲೋಸ್ಕರ್, ವಿಪ್ರೊ, ಫ್ಲಿಪ್ ಕಾರ್ಟ್, ಒರಾಕಲ್ ಇಂಡಿಯಾ, ಬಿಗ್ ಬಾಸ್ಕೆಟ್ ಸೇರಿದಂತೆ ದೊಡ್ಡ ಉದ್ಯಮ ಸಂಸ್ಥೆಗಳು ಭಾಗವಹಿಸುತ್ತಿವೆ. ಇನ್ನಷ್ಟು ಹೂಡಿಕೆದಾರರನ್ನು ಆಹ್ವಾನಿಸಲು ದೇಶ ಮಹಾನಗರಗಳಲ್ಲಿ ಪ್ರಚಾರಾಂದೋಲನ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಜಮ್ಮು ಕಾಶ್ಮೀರ ಸರ್ಕಾರದ ಯೋಜನಾ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್, ಕೃಷಿ ಮತ್ತು ತೋಟಗಾರಿಕೆ ಕಾರ್ಯದರ್ಶಿ ಮಂಜೂರ್ ಅಹ್ಮದ್ ಲೋನ್ ಸೇರಿದಂತೆ ಸರ್ಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.