ನವದೆಹಲಿ: ಸರಿ ಸುಮಾರು ಕಳೆದ ಐದಾರು ತಿಂಗಳುಗಳಿಂದ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ 19 ವೈರಸ್ ಮಹಾಮಾರಿ ಇಂದಿಗೆ ಬರೋಬ್ಬರಿ ಒಂದು ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ. ಇಷ್ಟಾದರೂ ಈ ಅಗೋಚರ ವೈರಾಣುವಿನ ಸಾವಿನ ದಾಹ ಇನ್ನೂ ತೀರಿದಂತಿಲ್ಲ. ಭಾರತ, ಅಮೆರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ಮಹಾಮಾರಿಯ ರುದ್ರ ನರ್ತನ ಮುಂದುವರೆದಿದೆ.
ಇದೇ ಸಂದರ್ಭದಲ್ಲಿ ವಿಶ್ವಾದ್ಯಂತ ಸೋಂಕುಪೀಡಿತರ ಸಂಖ್ಯೆ 16.5 ಲಕ್ಷಕ್ಕೇರಿದೆ. 3.72 ಲಕ್ಷ ಜನ ಈ ಸೋಂಕಿಗೆಗೆ ತುತ್ತಾಗಿಯೂ ಚೇತರಿಸಿಕೊಂಡಿದ್ದಾರೆ.
ಕೋವಿಡ್ ಅಟ್ಟಹಾಸಕ್ಕೆ ತುತ್ತಾಗಿರುವ ಅಮೆರಿಕಾದಲ್ಲಿ ಹೊಸದಾಗಿ 21 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 1343 ಹೊಸ ಸಾವಿನ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಅಮೆರಿಕಾದಲ್ಲಿ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ489,646ಕ್ಕೆ ಏರಿದ್ದು ಇದುವರೆಗೆ ಇಲ್ಲಿ 21 ಸಾವಿರ ಜನ ಈ ಅಗೋಚರ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಅಮೆರಿಕಾ ಬಳಿಕ ಕೊವಿಡ್ ವೈರಸ್ ನಿಂದ ಅತೀ ಹೆಚ್ಚು ಬಾಧಿತವಾಗಿರುವ ಸ್ಪೈನ್ ದೇಶದಲ್ಲಿ 3831 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಇಲ್ಲಿ ಇದುವರೆಗೆ 157,053 ಜನ ಸೋಂಕಿತರಾಗಿದ್ದು 15,970 ಸಾವುಗಳು ಸಂಭವಿಸಿವೆ. ಆದರೆ ಉಳಿದೆಲ್ಲಾ ಕೋವಿಡ್ ಪೀಡಿತ ದೇಶಗಳಿಗೆ ಹೋಲಿಸಿದರೆ ಇಲ್ಲಿ ಸೋಂಕಿಗೊಳಗಾಗಿ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ.
ಸ್ಪೈನ್ ನಲ್ಲಿ ಈಗಾಗಲೇ 55, 668 ಜನ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಅತೀ ಹೆಚ್ಚು ಕೋವಿಡ್ ಸೋಂಕು ಪೀಡಿತ ರಾಷ್ಟ್ರಗಳ ಸಾಲಿನಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಮತ್ತೆ 3,951 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು 570 ಹೊಸ ಸಾವು ಸಂಭವಿಸಿದೆ. ಒಟ್ಟಾರೆಯಾಗಿ 147,577 ಕೋವಿಡ್ ಸೋಂಕು ಪೀಡಿತರಲ್ಲಿ 18,849 ಜನ ಸಾವನ್ನಪ್ಪಿದ್ದಾರೆ ಹಾಗೂ 30,455 ಸೋಂಕಿತರು ಈಗಾಗಲೇ ಚೇತರಿಸಿಕೊಂಡಿದ್ದಾರೆ.
ಇನ್ನುಳಿದಂತೆ ಫ್ರಾನ್ಸ್ ನಲ್ಲಿ 124, 869 ಜನ ಕೋವಿಡ್ ಸೋಂಕು ಪೀಡಿತರಾಗಿದ್ದಾರೆ ಹಾಗೂ 13,917 ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜರ್ಮನಿಯಲ್ಲಿ 119,624 ಸೋಂಕು ಪೀಡಿತರಲ್ಲಿ 2,607 ಜನ ಸಾವನ್ನಪ್ಪಿದ್ದರೆ 52,407 ಜನ ಇದರಿಂದ ಚೇತರಿಸಿಕೊಂಡಿದ್ದಾರೆ. ಆದರೆ ಜರ್ಮನಿಯಲ್ಲಿ ಮತ್ತೆ 1,389 ಹೊಸ ಸೋಂಕು ಪ್ರಕರಣಗಳು ವರದಿಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಇಂಗ್ಲಂಡ್ ನಲ್ಲಿ 8,681 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಇಲ್ಲಿ ಸೋಂಕಿತರ ಸಂಖ್ಯೆ 73,758ಕ್ಕೆ ಏರಿಕೆಯಾಗಿದೆ ಮತ್ತು ಒಂದೇ ದಿನದಲ್ಲಿ 980 ಜನ ಸಾವಿಗೀಡಾಗುವುದರೊಂದಿಗೆ ಇಲ್ಲಿ ಒಟ್ಟು ಸಾವಿನ ಸಂಖ್ಯೆ 8,958ಕ್ಕೆ ಏರಿಕೆಯಾಗಿದೆ.
ಇರಾನ್ ನಲ್ಲಿ 68,192 ಸೋಂಕು ಪೀಡಿತರು 4,232 ಸಾವು, ಟರ್ಕಿಯಲ್ಲಿ 47,029 ಸೋಂಕಿತರು ಹಾಗೂ ಸಾವಿನ ಸಂಖ್ಯೆ 1,006 ದಾಟಿದೆ. ಭಾರತದಲ್ಲಿ 7,598 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು 873 ಹೊಸ ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿದೆ. ಇಲ್ಲಿ ಒಟ್ಟು ಸಾವಿನ ಸಂಖ್ಯೆ 246 ಆಗಿದೆ. 774 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.