ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್ 19 ಮಹಾಮಾರಿಗೆ 2.50 ಲಕ್ಷಕ್ಕಿಂತ ಹೆಚ್ಚು(2.52,380) ಜನರು ಬಲಿಯಾಗಿದ್ದು, ಇದರಲ್ಲಿ 85% ರಷ್ಟು ಮಂದಿ ಯುರೋಪ್ ಮತ್ತು ಅಮೆರಿಕಾ ದೇಶದವರೆಂದು ಹಿಂದೂ ಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಸೋಮವಾರ ರಾತ್ರಿಯ ಅಂಕಿ ಅಂಶಗಳ ಪ್ರಕಾರ ಅಮೆರಿಕಾದಲ್ಲಿ ಒಟ್ಟಾರೆ 68,689 ಜನರು ಈ ಮಾರಕ ವೈರಸ್ ಗೆ ಪ್ರಾಣ ತ್ಯೆಜಿಸಿದ್ದು, ಅತೀ ಹೆಚ್ಚು ಜನರು ಸಾವನ್ನಪ್ಪಿದ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ. ಆದರೆ ಒಟ್ಟಾರೆ ಯುರೋಪ್ ಖಂಡದಲ್ಲೇ 1,45,023 ಜನರು ಬಲಿಯಾಗಿದ್ದಾರೆ.
2019ರ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಈ ವೈರಸ್ ಕಂಡುಬಂದಾಗಿನಿಂದ ಹಲವು ದೇಶಗಳಲ್ಲಿ ಆರ್ಥಿಕತೆಯನ್ನು ಧ‍್ವಂಸ ಮಾಡಿದ್ದಲ್ಲದೆ, 3.6 ಮಿಲಿಯನ್ ಗಿಂತಲೂ ಹೆಚ್ಚು ಜನರಿಗೆ (36,45,194) ಸೋಂಕು ತಗುಲಿದೆ. ಅಮೆರಿಕಾದ ನಂತರ ಇಟಲಿಯಲ್ಲಿ(29,079), ಬ್ರಿಟನ್ ನಲ್ಲಿ(28,734), ಸ್ಪೇನ್ ನಲ್ಲಿ(25,428), ಫ್ರಾನ್ಸ್ ನಲ್ಲಿ (25,201) ಜನರು ಈ ಮಾರಕ ವೈರಸ್ ಗೆ ತುತ್ತಾಗಿ ಮೃತಪಟ್ಟಿದ್ದಾರೆ.
ಗಮನಾರ್ಹ ಸಂಗತಿಯೆಂದರೇ ಯುರೋಪ್ ನಲ್ಲಿ ಸುಮಾರು 1.5 ಮಿಲಿಯನ್ ನಷ್ಟು ಜನರಿಗೆ ಸೋಂಕು ದೃಢಪಟ್ಟಿದ್ದು, ಆದರೆ ಹಲವು ದೇಶಗಳಲ್ಲಿ ಕೇವಲ ಗಂಭೀರ ಪ್ರಕರಣಗಳನ್ನು ಮಾತ್ರ ಪರೀಕ್ಷಿಸಲಾಗಿದ್ದು, ಇದು ಅತ್ಯಂತ ಅಘಾತಕಾರಿ ವಿಚಾರವಾಗಿದೆ ಎಂದು ಮಾಧ‍್ಯಮದ ವರದಿ ತಿಳಿಸಿದೆ. ಜಗತ್ತಿನಾದ್ಯಂತ ಸೋಂಕಿಗೆ ತುತ್ತಾದ 11,94, 872 ಜನರು ಗುಣಮುಖರಾಗಿದ್ದು ಇದು ಆಶಾದಾಯಕ ಬೆಳವಣಿಗೆ ಎಂದು ವರದಿ ತಿಳಿಸಿದೆ.