Advertisement

ಆರ್ಥಿಕ ಆಘಾತದ ಭೀತಿಯಲ್ಲಿ ಜಾಗತಿಕ ಸಮುದಾಯ

01:35 AM Mar 17, 2022 | Team Udayavani |

ರಷ್ಯಾ ಹಾಗೂ ಉಕ್ರೇನ್‌ ನಡುವೆ ಈಗ ನಡೆಯುತ್ತಿರುವ ಯುದ್ಧದ ಪರಿಣಾಮವು ಗಂಭೀರ ಮಟ್ಟಕ್ಕೆ ತಲುಪಿದ್ದು ಇದು ಆ ಎರಡು ದೇಶಗಳಿಗಷ್ಟೇ ಸೀಮಿತವಾಗಿರದೆ ವಿಶ್ವವ್ಯಾಪಿಯಾಗಿದೆ. ಯುದ್ಧದ ಭೀಕರತೆ ಇಡೀ ಜಗತ್ತಿಗೆ ಆರ್ಥಿಕ ದುರಂತವಾಗಿಯೂ ಪರಿಣಮಿಸಲಿದೆ. ಇದರಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿತಕ್ಕೊಳಗಾಗಲಿದೆ ಎಂದು ಐಎಂಎಫ್ ಎಚ್ಚರಿಕೆ ನೀಡಿದೆ.

Advertisement

ಯಾವುದೇ ರಾಷ್ಟ್ರ ತಾನೆಷ್ಟೇ ಸ್ವಾವಲಂಬಿ, ಸ್ವದೇಶಿ ಎಂದು ಹೇಳಿಕೊಂಡರೂ ಇತರ ದೇಶಗಳ ಪ್ರತ್ಯಕ್ಷ ಅಥವಾ ಪರೋಕ್ಷ ಸಹಕಾರಗಳ ಅಗತ್ಯ ಇದ್ದೇ ಇರುತ್ತದೆ. ಈಗ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಆರ್ಥಿಕತೆಗೆ ಬಹುದೊಡ್ಡ ಹೊಡೆತವಾಗಿದೆ. ಈ ಯುದ್ಧದ ಅಡ್ಡಪರಿಣಾಮಗಳನ್ನು ಇಡೀ ವಿಶ್ವ ಸಮುದಾಯ ಗಂಭೀರವಾಗಿ ಪರಿಗಣಿಸಬೇಕಾಗಿದೆ. ವಿಶೇಷವಾಗಿ ಇಂಧನದ ಬೆಲೆ ಹೆಚ್ಚಳದ ಪರಿಣಾಮವಾಗಿ ಆಹಾರಧಾನ್ಯಗಳ ಸಹಿತ ಅಗತ್ಯವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಲಿದ್ದು ಜನಸಾಮಾನ್ಯರ ಪಾಲಿಗೆ ಆಘಾತಕಾರಿಯಾಗಲಿದೆ. ವಾಣಿಜ್ಯ ವಹಿವಾಟಿನ ಮೇಲೆ ಬಲವಾದ ಪೆಟ್ಟು ಬೀಳಲಿದೆ. ಆಮದು, ರಫ್ತು ಪ್ರಕ್ರಿಯೆಗೆ ಅಡಚಣೆಗಳು ಸೃಷ್ಟಿಯಾಗಲಿವೆ. ಕೊರೊನಾ ಸಂಕಷ್ಟದಿಂದ ಉಂಟಾದ ಬೆಲೆಯೇರಿಕೆಯ ಹೊಡೆತದಿಂದ ಕಂಗೆಟ್ಟಿದ್ದ ಜನತೆ ಈಗ ಮತ್ತೂಂದು ಸುತ್ತಿನ ಬೆಲೆ ಏರಿಕೆಯ ಹೊಡೆತವನ್ನು ತಾಳಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

ದೇಶದ ಆರ್ಥಿಕತೆ ಚೇತರಿಸುತ್ತಿರುವ ಸಮಯದಲ್ಲಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿರುವುದು ಇನ್ನೊಂದು ಆಘಾತಕಾರಿ ವಿಚಾರವಾಗಿದೆ. ಈ ಸಮರದ ಪರಿಣಾಮದಿಂದ ಕಚ್ಚಾತೈಲ ಬೆಲೆ ಐತಿಹಾಸಿಕ ಗರಿಷ್ಟ ಮಟ್ಟಕ್ಕೇರಿದೆ. ರಷ್ಯಾ ವಿರುದ್ಧ ಅಮೆರಿಕ ಮತ್ತು ಯುರೋಪಿಯನ್‌ ಯೂನಿಯನ್‌ ತೀವ್ರತೆರನಾದ ಆರ್ಥಿಕ ನಿರ್ಬಂಧಗಳನ್ನು ಹೇರಿರುವುದರಿಂದ ಜಾಗತಿಕ ಆರ್ಥಿಕತೆ ಮತ್ತು ಮಾರುಕಟ್ಟೆಯ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು ಇತರ ರಾಷ್ಟ್ರಗಳಿಗೂ ಇದರ ಬಿಸಿ ತಟ್ಟಲಿದೆ ಎಂದು ಐಎಂಎಫ್ ಹೇಳಿದೆ. ಇದು ಹಣದುಬ್ಬರಕ್ಕೆ ಕಾರಣವಾಗದಂತೆ ಎಲ್ಲ ರಾಷ್ಟ್ರಗಳು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದೆ. 2022-23ರ ಕೇಂದ್ರ ಬಜೆಟ್‌ನಲ್ಲಿ ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ 75 ಡಾಲರ್‌ ಎಂದು ಅಂದಾಜಿಸಲಾಗಿತ್ತು. ನವೆಂಬರ್‌ನಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 81.5 ಡಾಲರ್‌ಗಳಷ್ಟಿತ್ತು. ಇದೀಗ ಕಚ್ಚಾತೈಲದ ಬೆಲೆ ಒಂದೇ ಸವನೆ ಹೆಚ್ಚುತ್ತಲೇ ಸಾಗಿದೆ. ಜನಸಾಮಾನ್ಯರಿಗೆ ಒಂದೇ ಬಾರಿ ಹೊರೆಯಾಗದಂತೆ “ಡೈಲಿ ರೇಟ್‌ ಚೇಂಜ್‌ ಪಾಲಿಸಿ’ಯನ್ನು ಸರಕಾರ ಮತ್ತೆ ಜಾರಿಗೆ ತರಲಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿತ್ತು. ಇದೀಗ ಚುನಾವಣೆ ಮುಕ್ತಾಯಗೊಂಡಿದ್ದು ತೈಲ ಕಂಪೆನಿಗಳು ತೈಲ ಬೆಲೆ ಹೆಚ್ಚಿಸಲು ತುದಿಗಾಲಲ್ಲಿ ನಿಂತಿದ್ದು ಸರಕಾರದಿಂದ ಒಪ್ಪಿಗೆ ಲಭಿಸುತ್ತಿದ್ದಂತೆಯೇ ತೈಲಬೆಲೆ ಏರಿಕೆಯಾಗಲಿದೆ.

ರಷ್ಯಾದಿಂದ ಭಾರತವು ಅಲ್ಪ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದೆ. ಭಾರತಕ್ಕೆ ಬಹುತೇಕ ತೈಲ ಆಮದಾಗುವುದು ಕೊಲ್ಲಿ ರಾಷ್ಟ್ರಗಳು ಮತ್ತು ಆಫ್ರಿಕಾ ಮೂಲದಿಂದಾದುದರಿಂದ ಪೂರೈಕೆಗೆ ಸಮಸ್ಯೆಯಾಗಲಾರದು. ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿರುವುದರಿಂದ ದೇಶದಲ್ಲೂ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳವಾಗಲಿದೆ. ಇದರಿಂದ ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದೆ. ಚಿಲ್ಲರೆ ಹಣದುಬ್ಬರ ಹೆಚ್ಚಾಗಿ ಜನತೆಗೆ ಹೊರೆಯಾಗುತ್ತದೆ. ಅಮೆರಿಕ ಮತ್ತು ಚೀನದ ಬಳಿಕ ಜಗತ್ತಿನಲ್ಲಿ ಅತೀ ಹೆಚ್ಚು ತೈಲ ಬಳಕೆಯ ದೊಡ್ಡ ಗ್ರಾಹಕ ರಾಷ್ಟ್ರ ಭಾರತವಾಗಿದ್ದು ಶೇ. 85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಯುದ್ಧದಿಂದ ತೈಲ ಬೆಲೆ ಏರಿಕೆಯಾಗಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಹೆಚ್ಚಲಿದ್ದು ಬಡವರು ಮತ್ತು ಮಧ್ಯಮ ವರ್ಗದವರು ಮತ್ತೆ ಸಂಕಷ್ಟಕ್ಕೀಡಾಗಲಿದ್ದಾರೆ.

ಭಾರತವು ಎಷ್ಟೇ ಸ್ವಾವಲಂಬಿಯಾಗಲು ಪ್ರಯತ್ನಿಸಿದರೂ ಕಚ್ಚಾ ರೇಷ್ಮೆ, ಉಕ್ಕು, ಕಲ್ಲಿದ್ದಲು, ಯುದ್ಧ ಸಾಮಗ್ರಿಗಳು ಆಧುನಿಕ ತಂತ್ರಜ್ಞಾನದ ಬಿಡಿಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲೇಬೇಕಾಗಿದೆ. ಗೋಧಿ, ಸೂರ್ಯಕಾಂತಿ ಎಣ್ಣೆ, ದವಸಧಾನ್ಯಗಳಿಗೆ ರಷ್ಯಾ ಮತ್ತು ಉಕ್ರೇನ್‌ ಮೇಲೆ ಅವಲಂಬಿತವಾಗಿದೆ. ತಾಮ್ರ ಹಾಗೂ ಅಲ್ಯುಮಿನಿಯಂ ಲೋಹಗಳ ಮೇಲೂ ಭಾರತ ಈ ದೇಶಗಳನ್ನು ಅವಲಂಬಿಸಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಪ್ರಮಾಣ ಹೆಚ್ಚಲಿದೆ. ಈಗಾಗಲೇ ತೀವ್ರವಾಗಿ ಕಾಡುತ್ತಿರುವ ಹಣದುಬ್ಬರ ಸಾಮಾನ್ಯ ಜನರನ್ನು ಕಂಗಾಲಾಗಿಸಿದೆ. ಕೊರೊನಾ ಆತಂಕ ತಗ್ಗಿದ್ದರೂ ಇನ್ನೂ ಬೆಲೆ ಏರಿಕೆಯ ಸಂಕಷ್ಟದಿಂದ ಹೊರಬರಲು ಜನರಿಗೆ ಸಾಧ್ಯವಾಗಿಲ್ಲ. ಎರಡೇ ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ 215 ರೂ. ಹೆಚ್ಚಾಗಿದೆ. ಬೇಳೆಕಾಳುಗಳು, ಸಿಮೆಂಟ್‌, ಸ್ಟೀಲ್‌, ಅಡುಗೆ ಎಣ್ಣೆ ಸಹಿತ ದಿನಬಳಕೆ ವಸ್ತುಗಳು ದುಬಾರಿಯಾಗಿವೆ. ಇದೀಗ ಮತ್ತೆ ತೈಲ ಬೆಲೆ ಏರಿಕೆಯಿಂದ ಇವೆಲ್ಲದರ ಬೆಲೆ ಮತ್ತಷ್ಟು ಹೆಚ್ಚಳವಾಗಲಿದ್ದು ಜನಸಾಮಾನ್ಯರ ಬದುಕೇ ದುಸ್ತರವಾಗಲಿದೆ. ಈ ಯುದ್ಧದಿಂದ ಜಗತ್ತಿನಾದ್ಯಂತ ಗೋಧಿ, ಸೋಯಾಬಿನ್‌, ರಸಗೊಬ್ಬರ ಮತ್ತು ಲೋಹಗಳ ಸರಬರಾಜಿಗೆ ಅಡಚಣೆಯಾಗಿ ಇವುಗಳ ಬೆಲೆಯೂ ಕೂಡ ಸಹಜವಾಗಿಯೇ ಏರಿಕೆಯಾಗಿ ಆರ್ಥಿಕತೆ ಮುಗ್ಗರಿಸಲೂಬಹುದು. ಗೋಧಿ ರಫ್ತಿನಲ್ಲಿ ರಷ್ಯಾ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದರೆ ಉಕ್ರೇನ್‌ ನಾಲ್ಕನೇ ಸ್ಥಾನದಲ್ಲಿದೆ.

Advertisement

ರಷ್ಯಾದಿಂದ ಹೆಚ್ಚುವರಿ ತೈಲ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಯತ್ನ ನಡೆಸಿದೆ. ಇನ್ನು ತೈಲೋತ್ಪನ್ನ ಗಳಿಗೆ ಅಬಕಾರಿ ಸುಂಕ ಮತ್ತು ವ್ಯಾಟ್‌ ಇಳಿಸುವ ಮೂಲಕ ತಕ್ಕಮಟ್ಟಿಗೆ ಚಿಲ್ಲರೆ ಬೆಲೆ ಏರಿಕೆಯನ್ನು ತಡೆಯಬಹುದು. ತೈಲ ಪೂರೈಕೆ ರಾಷ್ಟ್ರಗಳೊಂದಿಗೆ ಚೌಕಾಶಿ ಮಾಡಿ ಕಚ್ಚಾ ತೈಲ ಖರೀದಿ, ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡಬಹುದು. ಯುದ್ಧದ ಪರಿ ಣಾಮದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಪರಿಣಾಮ ಬೀರಿರುವುದರಿಂದ ಜನ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿದ್ದಾರೆ. ಕಂಪೆನಿಗಳ ಹೂಡಿಕೆ ಬಗೆಗಿನ ಅನಿಶ್ಚಿತತೆ ಇದಕ್ಕೆ ಕಾರಣ. ಭಾರತವು ರಷ್ಯಾ ಮತ್ತು ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಔಷಧವನ್ನು ರಫ್ತು ಮಾಡುತ್ತದೆ. ಭಾರತದ ಮುಂಚೂಣಿ ಔಷಧ ಕಂಪೆನಿಗಳಾದ ಡಾ| ರೆಡ್ಡೀಸ್‌ ಲ್ಯಾಬ್‌, ರ್ಯಾನ್‌ಭಕ್ಷಿ, ಸನ್‌ಫಾರ್ಮಾಗಳ ರಫ್ತು ವ್ಯವಹಾರಕ್ಕೆ ಪರೋಕ್ಷವಾಗಿ ಧಕ್ಕೆಯಾಗಲಿದೆ.

ಹಣದುಬ್ಬರದ ವಿಚಾರದಲ್ಲಿ ಈಗಾಗಲೇ ಜನವರಿಯ ಗ್ರಾಹಕ ಸೂಚ್ಯಂಕದ ಪ್ರಮಾಣವು ಶೇ. 6.01 ತಲುಪಿ ಗಡಿರೇಖೆಯನ್ನು ದಾಟಿದೆ. ಸಗಟು ಹಣದುಬ್ಬರವೂ ಕೂಡ ಸತತ 10 ತಿಂಗಳುಗಳಿಂದ ಎರಡಂಕಿ ಮಟ್ಟ ದಾಟಿ ನಿಂತಿದೆ. ಕೋವಿಡ್‌ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಸರಕಾರ ಮತ್ತು ಆರ್‌ಬಿಐ ಹೊಂದಾಣಿಕೆ ನೀತಿಯನ್ನು ಅನುಸರಿಸಿದೆ. ಫೆ. 11 ರಂದು ಮುಕ್ತಾಯಗೊಂಡ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ಮತ್ತು ರಿವರ್ಸ್‌ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆಯ ದಿಢೀರ್‌ ಹೆಚ್ಚಳ ಹಣದುಬ್ಬರಕ್ಕೆ ಸವಾಲಾಗಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕಾಪಾಡಿಕೊಳ್ಳುವುದು ಕೂಡ ಬಲವಾದ ಸವಾಲು. ಆರ್‌ಬಿಐ ಹಣದುಬ್ಬರದ ಗಂಭೀರ ಸವಾಲನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ವ್ಯೂಹ ರಚನೆಯ ಯೋಚನೆ ಮತ್ತು ಯೋಜನೆ ರಚನಾತ್ಮಕವಾಗಿರಬೇಕು. ವಿಶ್ವದ ಕೇಂದ್ರೀಯ ಬ್ಯಾಂಕ್‌ಗಳಾದ ಕೆನಡಾ, ಇಂಗ್ಲೆಂಡ್‌, ಬ್ರೆಜಿಲ್‌, ದಕ್ಷಿಣ ಕೊರಿಯಾ ತಮ್ಮ ಪಾಲಿಸಿ ದರಗಳನ್ನು ಏರಿಸಿವೆ. ಆರ್‌ಬಿಐಗೆ ಹೊಂದಾಣಿಕೆ ನೀತಿ ಕಷ್ಟ ಸಾಧ್ಯ. ಪಾಲಿಸಿ ದರಗಳನ್ನು ಪುನರ್‌ ವಿಮರ್ಶಿಸಬೇಕಾದ ಸಂದಿಗ್ಧತೆಯಿದೆ. ಎಪ್ರಿಲ್‌-ಜೂನ್‌ಗೆ 50 ಬೇಸಿಸ್‌ ಪಾಯಿಂಟ್‌ ರೆಪೋ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.

ಮತ್ತೆ ಬೆಲೆ ಏರಿಕೆಯ ಆತಂಕ
ರಷ್ಯಾ-ಉಕ್ರೇನ್‌ ಸಮರ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಕೊರೊನಾದಿಂದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವಾಗಲೇ ಯುದ್ಧ ಆರಂಭಗೊಳ್ಳುವ ಮೂಲಕ ಮತ್ತೂಂದು ಹೊಡೆತ ನೀಡಿದೆ. ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚುತ್ತಲೇ ಸಾಗಿದ್ದು ವಿಶ್ವಾದ್ಯಂತ ತೈಲ ಬೆಲೆ ಏರುಗತಿಯಲ್ಲಿದೆ. ಇದರ ಪರಿಣಾಮ ಆಹಾರ ಧಾನ್ಯಗಳ ಸಹಿತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಭಾರತ ಸಹಿತ ಎಲ್ಲ ರಾಷ್ಟ್ರಗಳನ್ನು ಹಣದುಬ್ಬರದ ಭೀತಿ ಕಾಡತೊಡಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವದ ಹಲವಾರು ದೇಶಗಳಲ್ಲಿ ಆಹಾರದ ಅಭಾವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯುದ್ಧ ಶೀಘ್ರವೇ ಅಂತ್ಯಗೊಳ್ಳದೇ ಹೋದಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಯಥಾಸ್ಥಿತಿಗೆ ಮರಳದೇ ಹೋದಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಲಿದೆ.

-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next