ಬೆಂಗಳೂರು: ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಅಳವಡಿಕೆ ಮತ್ತು ಕೌಶಲಾಭಿವೃದ್ಧಿಗೆ ಜಾಗತಿಕ ಪ್ರತಿಭೆ, ಸಂಪನ್ಮೂಲ ಹಾಗೂ ನೈಪುಣ್ಯ ಬಳಕೆಗೆ ವೇದಿಕೆ ಕಲ್ಪಿಸಿಕೊಡುವ ಬಹುನಿರೀಕ್ಷಿತ “ಕರ್ನಾಟಕ ಗ್ಲೋಬಲ್ ಕ್ಯಾಪ್ಯಾಬಿಲಿಟಿ ಸೆಂಟರ್’ (ಜಿಸಿಸಿ) ವರದಿಯನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಬಿಡುಗಡೆಗೊಳಿಸಿದರು.
ವಿಧಾನಸೌಧದಲ್ಲಿ ನಡೆದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಸಿಸಿ ಉದ್ಯಮದ ಪ್ರಮುಖ ನಾಯಕರು ಮತ್ತು ಅನುಭವಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಜಿಸಿಸಿಗಳಿಗೆ ಪ್ರಮುಖ ತಾಣವಾಗಿ ಗಟ್ಟಿಗೊಳಿಸುವ ಮತ್ತು ಉನ್ನತೀಕರಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು.
ರಾಜ್ಯ ಸರಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಜತೆಗೆ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನಿರ್ಮಾಣ, ನಿರ್ವಹಣೆ ಮತ್ತು ವಿಸ್ತರಣೆಯಲ್ಲಿ ಮಾರುಕಟ್ಟೆ ಮುಂಚೂಣಿಯಲ್ಲಿರುವ ಎಎನ್‌ಎಸ್‌ಆರ್ ಸಹಯೋಗದೊಂದಿಗೆ ಬಹುನಿರೀಕ್ಷಿತ ಕರ್ನಾಟಕ ಜಿಸಿಸಿ ಭೂದೃಶ್ಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.
ಈ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್, ರಾಜ್ಯದಲ್ಲಿ ಕಾರ್ಯಾಚರಿಸ ಬಯಸುವ ಜಿಸಿಸಿಗಳಿಗೆ ಉತ್ತಮ ಬೆಂಬಲ ನೀಡಲು ನಾವು ಭಾರತದ ಮೊದಲ ಜಿಸಿಸಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನ, ಐಟಿ ಸೇವಾ ಉದ್ಯಮ ಮತ್ತು ಜಿಸಿಸಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಉದ್ಯಮವನ್ನು ಮತ್ತಷ್ಟು ಉತ್ತೇಜಿಸಲು, ರಾಜ್ಯ ಸರಕಾರವು ಹೊಸ ಪ್ರೋತ್ಸಾಹಕಗಳು, ನೀತಿಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳು ಬೆಂಗಳೂರು ಸೇರಿ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿನಂತಹ ಉದಯೋನ್ಮುಖ ಟೆಕ್ ಕ್ಲಸ್ಟರ್‌ಗಳಲ್ಲಿ ಜಿಸಿಸಿ ಸ್ಥಾಪನೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಬೆಂಗಳೂರು ಆಚೆ 15 ಜಿಸಿಸಿಗಳು
ರಾಜ್ಯದಲ್ಲಿ ಬೆಂಗಳೂರು ಜಿಸಿಸಿಗಳಿಗೆ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಆದರೆ ರಾಜಧಾನಿಯ ಹೊರಗಿನ ಪ್ರದೇಶಗಳು ಕೂಡ ಈ ಸಂಸ್ಥೆಗಳಿಗೆ ಆಕರ್ಷಕ ತಾಣಗಳಾಗಿವೆ. ಈಗಾಗಲೇ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಬೆಳಗಾವಿ-ಧಾರವಾಡ ಪ್ರದೇಶಗಳಲ್ಲಿ 15ಕ್ಕೂ ಹೆಚ್ಚು ಜಿಸಿಸಿಗಳು ಸ್ಥಾಪನೆಯಾಗಿವೆ ಎಂದು ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾಹಿತಿ ನೀಡಿದರು.