ಮಂಗಳೂರು: ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಲಖನೌ ನೀಡಿದ ಇಂಟರ್‌ನ್ಯಾಶನಲ್ ವರ್ಲ್ಡ್ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ ಅನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್‌ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಬುಧವಾರ ದುಬಾೖಯಲ್ಲಿ ಸ್ವೀಕರಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೈಲ್ ಸ್ಟೋನ್ ಗ್ಲೋಬಲ್ ಅಚೀವರ್ಸ್ ಸಂಸ್ಥೆ ನೀಡುತ್ತಿದ್ದು, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾರ್ಥಕ ಸೇವೆಯ ಜತೆಗೆ ಅದ್ಭುತ ಸಾಧನೆಗೈದ ಡಾ| ರಾಜೇಂದ್ರ ಕುಮಾರ್ ಅವರಿಗೆ ಪ್ರಶಸ್ತಿಯನ್ನು ಪ್ರಿನ್ಸ್ ಸುಹೇಲ್ ಮೊಹಮ್ಮದ್ ಅಲ್ ಝರೂನಿ ಪ್ರದಾನ ಮಾಡಿದರು.
ಡಾ| ರಾಜೇಂದ್ರ ಕುಮಾರ್ ಸಾರಥ್ಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. 28 ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷರಾಗಿ ಅಮೋಘ ಸಾಧನೆಗೈದಿರುವ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಅನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಸ್‌ಸಿಡಿಸಿಸಿ ಬ್ಯಾಂಕ್ 111 ಶಾಖೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿದ್ದು, ಆ ಭಾಗದ ಜನರ ಆರ್ಥಿಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನವೋದಯ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯ ರಲ್ಲಿ ಆರ್ಥಿಕ ಸಶಕ್ತೀಕರಣದ ಚೈತನ್ಯ ಮೂಡಿಸಿದ ಹೆಗ್ಗಳಿಕೆ ರಾಜೇಂದ್ರ ಕುಮಾರ್ ಅವರದ್ದು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಲ್ ಸ್ಟೋನ್ ಗ್ಲೋಬಲ್ ಅಚೀವರ್ಸ್ ಸಂಸ್ಥೆಯ ಸಿಇಒ ಡಾ| ಎಂ. ಮಲಿಕ್, ಹೊಸದಿಲ್ಲಿಯ ಅರ್ಥಶಾಸ್ತ್ರಜ್ಞ ರಾಜೇಂದ್ರ ಕುಮಾರ್ ರಾಜ್ ಮೊದಲಾದವರಿದ್ದರು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲೊÂàಟ್ಟು, ಸಿಇಒ ರವೀಂದ್ರ ಬಿ. ಹಾಗೂ ಜಯಪ್ರಕಾಶ್ ತುಂಬೆ ಉಪಸ್ಥಿತರಿದ್ದರು.