Advertisement
ವಿಶ್ವಸಂಸ್ಥೆ ವಿಧಿಸಿದ ಮಿತಿ
Related Articles
Advertisement
ಪ್ಯಾರಿಸ್ ಒಪ್ಪಂದ
2015ರ ಅಂತ್ಯದಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿದವು. ಅನಿಲ ಹೊರಸೂಸುವಿಕೆ ತಗ್ಗಿಸುವ ಮತ್ತು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿ.ಸೆ.ಗೆ ಮಿತಿಗೊಳಿಸುವ ನಿಟ್ಟಿನಲ್ಲಿ ದೀರ್ಘಾವಧಿ ಧ್ಯೇಯವನ್ನು ಹಾಕಿಕೊಳ್ಳಲಾಗಿತ್ತು. ಆದರೆ ದೀರ್ಘಾವಧಿ ಎಚ್ಚರಿಕೆಯ ರೂಪದಲ್ಲಿ ಈ ಮಿತಿಯನ್ನು ವಿಧಿಸಲಾಗಿತ್ತು. 2016ರಲ್ಲಿ ಪ್ಯಾರಿಸ್ ಒಪ್ಪಂದ ಜಾರಿಗೆ ಬಂದಿತು. ಆದರೆ ಒಪ್ಪಂದ ಕೇವಲ ಘೋಷಣೆಗಷ್ಟೇ ಸೀಮಿತವಾಯಿತೇ ವಿನಾ ಅದು ಇಂದಿಗೂ ಪರಿಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ವಿಶ್ವದ ಬಲಾಡ್ಯ ರಾಷ್ಟ್ರಗಳೇ ನಿಗದಿತ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಇಂಗಾಲಾಮ್ಲ ಹೊರಸೂಸುವಿಕೆ ಮತ್ತು ತಾಪವರ್ಧಕ ಅನಿಲಗಳ ಉತ್ಸರ್ಜನೆಯನ್ನು ಕಡಿಮೆ ಮಾಡಲು ವಿಶ್ವ ರಾಷ್ಟ್ರಗಳು ವಿಫಲವಾಗಿದ್ದರೆ ಇನ್ನು ಬಡ ರಾಷ್ಟ್ರಗಳ ಪಾಲಿಗೆ ಪ್ಯಾರಿಸ್ ಒಪ್ಪಂದ ಕೈಗೆಟುಕದ ದ್ರಾಕ್ಷಿಯಂತಾಗಿದೆ.
ತಜ್ಞರ ಆತಂಕ
ಕೈಗಾರಿಕ ಕ್ರಾಂತಿಗೆ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿ.ಸೆ.ನಷ್ಟು (+2ಡಿ.ಸೆ.) ಏರಿಕೆಯಾದರೆ ಮನುಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. +1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಉಕ್ಕೇರಿ ಬಹುಪಾಲು ಸಣ್ಣ ದ್ವೀಪ ರಾಷ್ಟ್ರಗಳು ಮುಳುಗಿ ಹೋಗುವ ಭೀತಿ ಯನ್ನೂ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಇದೇ ಪ್ರಮಾಣದಲ್ಲಿ ವಾತಾವರಣಕ್ಕೆ ಇಂಗಾಲಾಮ್ಲವನ್ನು ತುಂಬುತ್ತಾ ಹೋದರೆ 2100ರ ಹೊತ್ತಿಗೆ ಭೂ ತಾಪಮಾನ +2ಡಿಗ್ರಿ ಸೆಲ್ಸಿಯಸ್ ದಾಟಿ ಹೋಗಲಿದೆ ಎಂಬ ಆತಂಕ ಹವಾಮಾನ ತಜ್ಞರದ್ದಾಗಿದೆ.
ವಿಶ್ವಸಂಸ್ಥೆ ಎಚ್ಚರಿಕೆ
ಜಗತ್ತು ಹವಾಮಾನ ವೈಪರೀತ್ಯದತ್ತ ದಾಪುಗಾಲಿಡುತ್ತಿದೆ. ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಕೈಗೊಂಡಿರುವ ಕ್ರಮಗಳು ಅಸಮರ್ಪಕ ಮತ್ತು ಪರ್ಯಾಪ್ತವಾಗಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಸಮುದಾಯದ ಸದ್ಯದ ಹವಾಮಾನ ನೀತಿಗಳು ಈ ಶತಮಾನದ ಅಂತ್ಯಕ್ಕೆ ಜಾಗತಿಕ ಸರಾಸರಿ ತಾಪಮಾನವನ್ನು 2.8 ಡಿ.ಸೆ.ಗಳಿಗೆ ಕೊಂಡೊಯ್ಯಲಿದೆ. ಇದು ಕೈಗಾರಿಕಾ ಕ್ರಾಂತಿಗೆ ಮೊದಲು ಇದ್ದ ಜಾಗತಿಕ ಸರಾಸರಿ ತಾಪಮಾನಕ್ಕಿಂತ ಅಧಿಕವಾಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವಸಂಸ್ಥೆ ನಿಗದಿಪಡಿಸಿದ 1.5 ಡಿ.ಸೆ. ಮಿತಿಗಿಂತ ದುಪ್ಪಟ್ಟಿನಷ್ಟಾಗಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು ವಿನಾಶದತ್ತ ನಮ್ಮನ್ನು ಕೊಂಡೊಯ್ಯುತ್ತಿದೆ. ತಾಪಮಾನ ನಿಯಂತ್ರಣದ ದಿಸೆಯಲ್ಲಿ ಜಾಗತಿಕ ಸಮುದಾಯದ ಪ್ರಯತ್ನ ತೀರಾ ನಿರಾಶಾದಾಯಕವಾಗಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ರಾಷ್ಟ್ರಗಳು ಕೀಳಂದಾಜಿಸಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗತಿಕ ಸಮುದಾಯದಲ್ಲಿ ಮಹತ್ವಾಕಾಂಕ್ಷೆ, ನಂಬಿಕೆ, ಬೆಂಬಲ, ಸಹಕಾರ, ಸ್ಪಷ್ಟತೆ ಮತ್ತು ವಿಶ್ವಾಸಾರ್ಹತೆಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನಾದರೂ ವಿಶ್ವ ಸಮುದಾಯ ಎಚ್ಚೆತ್ತುಕೊಂಡು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸಲು ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆ ತೋರಬೇಕಿದೆ ಎಂದವರು ಕಿವಿಮಾತು ಹೇಳಿದ್ದಾರೆ.
ಜೂ.9ರಂದು ಗರಿಷ್ಠ ತಾಪಮಾನ ದಾಖಲು
ಜೂ.7-11ರ ವರೆಗಿನ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನವು ನಿಗದಿತ ಮಿತಿಯಾದ 1.5 ಡಿ.ಸೆ. ಅಥವಾ ಅದಕ್ಕಿಂತ ಕೊಂಚ ಅಧಿಕವಾಗಿತ್ತು ಆದರೆ ಜೂನ್ 9ರಂದು ಗರಿಷ್ಠ 1.69 ಡಿ.ಸೆ. ಗಳಷ್ಟು ದಾಖಲಾಗುವ ಮೂಲಕ ಅಪಾಯದ ಕರೆಗಂಟೆಯನ್ನು ಬಾರಿಸಿದೆ. ಇದೇ ವೇಳೆ ಜೂ.8 ಮತ್ತು ಜೂ. 9ರಂದು ಜಾಗತಿಕ ಸರಾಸರಿ ದೈನಂದಿನ ಈ ದಿನಗಳಲ್ಲಿ ಈ ಹಿಂದೆ ದಾಖಲಾಗಿದ್ದ ಗರಿಷ್ಠ ತಾಪಮಾನಕ್ಕಿಂತ 0.4ಡಿ.ಸೆ.ನಷ್ಟು ಹೆಚ್ಚಿನದಾಗಿದೆ.