ಬೆಂಗಳೂರು: ಚೆನ್ನೈ ತಂಡದ ಎಡಗೈ ಆಟಗಾರರ ಚಮತ್ಕಾರದ ಆಟದಿಂದಾಗಿ ಆರ್‌ಸಿಬಿ ತಂಡವು ಎಂಟು ರನ್ನುಗಳಿಂದ ಸೋಲನ್ನು ಕಾಣ ಬೇಕಾಯಿತು ಎಂದು ಆರ್‌ಸಿಬಿಯ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅಭಿಪ್ರಾಯಪಟ್ಟಿದ್ದಾರೆ.
ಎಡಗೈ ಆಟಗಾರರಾದ ಆರಂಭಿಕ ಡೇವನ್ ಕಾನ್ವೇ, ಶಿವಂ ದುಬೆ ಮತ್ತು ಮೊಯಿನ್ ಅಲಿ ಅವರ ಉತ್ತಮ ಆಟದಿಂದಾಗಿ ಚೆನ್ನೈ ಬೃಹತ್ ಮೊತ್ತ ಪೇರಿಸಿತು. ಚಿಕ್ಕ ಬೌಂಡರಿ ಲೈನ್‌ನ ಲಾಭ ವೆತ್ತಿದ ಅವರೆಲ್ಲರೂ ತಂಡದ ಗೆಲುವಿನ ಮೊತ್ತಕ್ಕೆ ಸಹಕರಿಸಿದ್ದರು. ಕಾನ್ವೇ 45 ಎಸೆತಗಳಲ್ಲಿ 83 ರನ್ ಹೊಡೆದು ಮಿಂಚಿದರು ಎಂದು ಮ್ಯಾಕ್ಸ್‌ವೆಲ್ ಹೇಳಿದರು. ಇದೇ ವೇಳೆ ಮ್ಯಾಕ್ಸ್ ವೆಲ್ ಕೂಡ ಇನ್ನಷ್ಟು ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಇರುತ್ತಿದ್ದರೆ ಪಂದ್ಯದ ಗತಿ ಬದಲಾಗುವ ಸಾಧ್ಯತೆಯೂ ಇತ್ತು. ಮ್ಯಾಕ್ಸ್‌ವೆಲ್ 76 ರನ್ ಹೊಡೆದಿದ್ದರು. ಇದು ಅವರ ಈ ಐಪಿಎಲ್‌ನಲ್ಲಿ ಎರಡನೇ ಅರ್ಧಶತಕವಾಗಿದೆ.
ಪ್ಲೆಸಿಸ್ ಮತ್ತು ನಾನು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೆವು. ನಮ್ಮಿಬ್ಬರ ಹೋರಾಟದ ಆಟ ನೋಡಿದಾಗ ಗೆಲುವು ಸಾಧ್ಯವೆಂದು ಭಾವಿಸಿದ್ದೆವು. ಆದರೆ ನಾವಿಬ್ಬರು ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಸೇರಿದ್ದರಿಂದ ತಂಡ ಒತ್ತಡಕ್ಕೆ ಬಿತ್ತು. ಇದುವೇ ಸೋಲಿಗೆ ಕಾರಣವಾಗಿತ್ತು ಎಂದು ಮ್ಯಾಕ್ಸ್‌ವೆಲ್ ಹೇಳಿದರು.