Advertisement

ಕದ್ರಿ ದೇವಾಲಯ ರಸ್ತೆಗೆ ಹೆರಿಟೇಜ್‌ ಬೀದಿ ದೀಪಗಳ ಮೆರುಗು !

10:15 AM Nov 25, 2018 | Team Udayavani |

ಮಹಾನಗರ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಸ್ತೆಗೆ ಆಲಂಕಾರಿಕ ಹೆರಿಟೇಜ್‌ ಬೀದಿ ದೀಪಗಳ ಮೆರಗು ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ. ದೇಶದ ವಿವಿಧ ಮೂಲೆಗಳಿಂದ ಕದ್ರಿ ದೇಗುಲಕ್ಕೆ ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ದೇಗುಲ ರಸ್ತೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಮಂಗಳೂರಿಗೆ ಬರುವ ಪ್ರವಾಸಿಗರನ್ನು ಸೆಳೆಯಲು ರಸ್ತೆಗೆ ಹೆರಿಟೇಜ್‌ ಬೀದಿದೀಪಗಳನ್ನು ಅಳವಡಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಯೋಜನೆಗೆ ಸಂಬಂಧಿಸಿದಂತೆ ಡಿಸೆಂಬರ್‌ ಮೊದಲ ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್‌ ಅಂತ್ಯದೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Advertisement

30-40 ಲಕ್ಷ ರೂ. ವೆಚ್ಚ 
ಈಗ ಬೀಚ್‌ ಸಹಿತ ಇತರ ಪ್ರವಾಸಿ ತಾಣಗಳಿಂದಾಗಿ ಮಂಗಳೂರು ಪ್ರವಾಸಿಗರನ್ನು ಸೆಳೆಯುತ್ತಿದ್ದು, ಇನ್ನಷ್ಟು ನೂತನ ಯೋಜನೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಸ್ಥಳೀಯಾಡಳಿತ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ದ ದೇಗುಲ ರಸ್ತೆಗೆ ಹೆರಿಟೇಜ್‌ ದೀಪಗಳನ್ನು ಅಳವಡಿಸಲು ಪಾಲಿಕೆ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಸರಕಾರದ 14ನೇ ಹಣಕಾಸು ಆಯೋಗದ ಅನುದಾನದ ಮೂಲಕ ಸುಮಾರು 30ರಿಂದ 40 ಲಕ್ಷ ರೂ. ವೆಚ್ಚದಲ್ಲಿ ಕದ್ರಿ ದೇಗುಲ ರಸ್ತೆ ಸೌಂದರ್ಯವರ್ಧನೆ ನಡೆಯಲಿದೆ.

ಮೈಸೂರು ಅರಮನೆ ರಸ್ತೆಯಲ್ಲಿ ಹೆರಿಟೇಜ್‌ ದೀಪಗಳು
ರಾಜ್ಯದ ಬಹುಮುಖ್ಯ ಪ್ರವಾಸಿ ತಾಣಗಳಲ್ಲಿ ಒಂದಾದ ಮೈಸೂರು ಅರಮನೆ ರಸ್ತೆ ಆವರಣದಲ್ಲಿ ಅಳವಡಿಸಲಾಗಿರುವ ಹೆರಿಟೇಜ್‌ ದೀಪಗಳಂಥವುಗಳನ್ನೇ É ಕದ್ರಿ ದೇಗುಲದ ಮುಂಭಾಗದ 680 ಮೀ. ಉದ್ದದ ರಸ್ತೆಗೆ ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಹೆರಿಟೇಜ್‌ ಬೀದಿ ದೀಪಗಳು ಇತರ ವಿದ್ಯುತ್‌ ದೀಪಗಳಿಂದ ವಿಶೇಷವಾಗಿದ್ದು, ಕಂಬಗಳಲ್ಲಿ ಚಿತ್ರಕಲೆಗಳು ಇರಲಿವೆ. ದೀಪಗಳು ರಾಜರ ಕಾಲದ ದೀಪದಂತೆ ಆಕರ್ಷಣೀಯವಾಗಿದ್ದು ಬೀದಿಗೆ ಪಾರಂಪರಿಕ ನೋಟ ನೀಡಲಿದೆ. ಈ ವಿದ್ಯುತ್‌ ಕಂಬಗಳ ಕೇಬಲ್‌ಗ‌ಳನ್ನು ನೆಲದ ಅಡಿಯಲ್ಲಿ ಹಾಕಲಾಗುತ್ತದೆ. ಇದನ್ನು ಇಂದೋರ್‌ನಿಂದ ತರಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಕ್ರೀಟ್‌ ಕಂಬ ತೆರವು
ಈಗ ದೇಗುಲದ ರಸ್ತೆಯಲ್ಲಿ ಅಳವಡಿಸಲಾಗಿರುವ ಕಾಂಕ್ರೀಟ್‌ ವಿದ್ಯುತ್‌ ಕಂಬಗಳ ತೆರವು ಕಾರ್ಯ ನಡೆಯಲಿದೆ. ರಸ್ತೆಯ ಅಂದ ಹೆಚ್ಚಿಸಲು ಕೇವಲ ದೀಪಗಳ ಮೆರುಗು ಸಾಲದು ಎಂಬ ಕಾರಣಕ್ಕಾಗಿ ರಸ್ತೆಯ ಕಾಂಕ್ರೀಟ್‌ ಕಾಮಗಾರಿ, ಫುಟ್‌ಪಾತ್‌ ಸಹಿತ ವಿವಿಧ ಕಾಮಗಾರಿಗಳನ್ನು ಪಾಲಿಕೆಯ ವಿವಿಧ ಅನುದಾನದಿಂದ ಮಾಡಲಾಗಿದೆ.

ಅಂದ ಹೆಚ್ಚಿಸಲು ಹೆರಿಟೇಜ್‌ ದೀಪ
ಕದ್ರಿ ದೇವಸ್ಥಾನ ರಸ್ತೆಗೆ ಪಾರಂಪರಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ರಸ್ತೆಗೆ ಪಾರಂಪರಿಕ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತದೆ. ಡಿಸೆಂಬರ್‌ ಮೊದಲ ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಅಂತ್ಯದೊಳಗೆ ದೇಗುಲ ರಸ್ತೆಗೆ ಹೊಸ ವಿದ್ಯುತ್‌ ಕಂಬ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ.
– ಪ್ರವೀಣ್‌ ಚಂದ್ರ ಆಳ್ವ,
ಅಧ್ಯಕ್ಷರು ನಗರ ಯೋಜನೆ
ಮತ್ತು ಅಭಿವೃದ್ಧಿ ಸ್ಥಾಯೀ ಸಮಿತಿ

Advertisement

 ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next