ಗಾಜಿನ ಬಾಗಿಲನ್ನು ತಳ್ಳದೇ, ಅದರ ಒಳಗೆ ತೂರಿಕೊಂಡು ಹೋಗಲು ನಿಮಗೆ ಸಾಧ್ಯವೇ? ಏನು, ಗಾಜಿನ ಬಾಗಿಲಿನೊಳಗೆ ತೂರಿಕೊಂಡು ಹೋಗೋದಾ? ಅಂತ ಕಣ್ಣರಳಿಸಬೇಡಿ. ಅದು ಬೇಡ ಬಿಡಿ, ಗಾಜಿನ ಲೋಟದೊಳಗೆ ಒಂದು ನಾಣ್ಯವನ್ನು ತೂರಿಸೋಕೆ ಸಾಧ್ಯವಾ?.. ಅದಕ್ಕೂ ಇಲ್ಲ ಅಂತಿದೀರ, ಹಾಗಾದ್ರೆ ನಾವು ಮಾಡಿ ತೋರಿಸುತ್ತೇವೆ ನೋಡಿ…
ಬೇಕಾಗುವ ವಸ್ತು: ಬಾಟಲಿಯ ಮುಚ್ಚಳ, ನಾಣ್ಯ ಹಾಗೂ ಗಾಜಿನ ಲೋಟ
ಪ್ರದರ್ಶನ: ಜಾದೂಗಾರನ ಬಲ ಅಂಗೈ ಮೇಲೆ ಬಾಟಲಿಯ ಮುಚ್ಚಳ ಇರುತ್ತದೆ. ಪಕ್ಕದ ಟೇಬಲ್ ಮೇಲೆ ಒಂದು ನಾಣ್ಯ ಹಾಗೂ ಗಾಜಿನ ಲೋಟ ಇಡಲಾಗುತ್ತದೆ. ಜಾದೂಗಾರ ಲೋಟವನ್ನು ಎತ್ತಿ, ಬಲಗೈ ಅಂಗೈ ಮೇಲಿನ ಮುಚ್ಚಳದ ಮೇಲೆ ಬೋರಲಾಗಿ ಇಡುತ್ತಾನೆ. ನಂತರ ಟೇಬಲ್ ಮೇಲಿರುವ ನಾಣ್ಯವನ್ನು ಜಾರಿಸುತ್ತಾ ಎತ್ತಿಕೊಂಡು, ಕೈಯನ್ನು ಗಾಜಿನ ಲೋಟದ ಮೇಲೆ ಟಪ್ ಟಪ್ ಎಂದು ಎರಡು ಬಾರಿ ಹೊಡೆಯುತ್ತಾನೆ. ಏನಾಶ್ಚರ್ಯ?! ಕೈಯಲ್ಲಿದ್ದ ನಾಣ್ಯ ಗಾಜಿನ ಲೋಟವನ್ನು ಭೇದಿಸಿ ಒಳಗೆ ಸೇರಿಕೊಂಡುಬಿಟ್ಟಿರುತ್ತದೆ. ಹಾಗಾದ್ರೆ, ನಾಣ್ಯ ಗಾಜನ್ನು ತೂರಿಕೊಂಡು ಒಳಗೆ ಹೋಗಿದ್ದಾದರೂ ಹೇಗೆ?
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ನಿಮ್ಮ ಅಂಗೈ ಮೇಲಿರುವ ಮುಚ್ಚಳದಲ್ಲಿ. ಇಲ್ಲಿ ಮುಚ್ಚಳವನ್ನು ಯಾಕೆ ಬಳಸಿಕೊಳ್ಳಲಾಗಿದೆ ಗೊತ್ತಾ? ಆ ಮುಚ್ಚಳದ ಕೆಳಗೆ ಒಂದು ನಾಣ್ಯವನ್ನು ಇಡಲಾಗುತ್ತದೆ. ಅಂದರೆ, ಒಂದು ನಾಣ್ಯ ನೋಡುಗರಿಗೆ ಕಾಣಿಸುವಂತೆ ಟೇಬಲ್ ಮೇಲಿದ್ದರೆ, ಇನ್ನೊಂದು ನಾಣ್ಯ ಯಾರಿಗೂ ಕಾಣದಂತೆ ಮುಚ್ಚಳದ ಕೆಳಗೆ ಅಡಗಿ ಕುಳಿತಿರುತ್ತದೆ. ನೀವು, ಟೇಬಲ್ ಮೇಲಿರುವ ನಾಣ್ಯವನ್ನು ನಿಧಾನಕ್ಕೆ ಜಾರಿಸುತ್ತಾ ಕೈಗೆತ್ತಿಕೊಳ್ಳುವಂತೆ ಕಣRಟ್ಟು ಮಾಡಿ, ಟೇಬಲ್ ಕೆಳಗೆ ಬೀಳಿಸಿಬಿಡಬೇಕು. ನಂತರ ಸುಮ್ಮನೆ ಕೈಯನ್ನು ಲೋಟದ ಮೇಲೆ ಜೋರಾಗಿ ಕುಟ್ಟಿ, ಒಳಗಿರುವ ಮುಚ್ಚಳ ಅಲ್ಲಾಡುವಂತೆ ಮಾಡಿದರೆ ಸಾಕು. ಅದರ ಕೆಳಗೆ ಇರುವ ನಾಣ್ಯ ನೋಡುಗರಿಗೆ ಕಾಣಿಸುತ್ತದೆ. ಕೈಯಲ್ಲಿದ್ದ ನಾಣ್ಯವೇ ಗಾಜಿನ ಲೋಟವನ್ನು ತೂರಿಕೊಂಡು ಒಳಗೆ ಸೇರಿದೆ ಎಂದು ಪ್ರೇಕ್ಷಕರು ಭಾವಿಸುತ್ತಾರೆ.
ವಿನ್ಸೆಂಟ್ ಲೋಬೋ