ಮೊನ್ನೆ ಬಸ್‌ನಲ್ಲಿ ಕಿಟಕಿ ಪಕ್ಕ ಕೂತು ಪೇಟೆಯಿಂದ ಮನೆಗೆ ಬರ್ತಾ ಇದ್ದೆ. ಒಂದು ಸ್ಟಾಪ್‌ನಲ್ಲಿ ಒಬ್ಬ ವಯಸ್ಸಾದ ಅಜ್ಜ ಹತ್ತಿದ. ಪಾಪ, ಅವನಿಗೆ ಕೂರೋಕೆ ಸೀಟ್ ಇರ್ಲಿಲ್ಲ. ಕೋಲು ಊರ್ಕೊಂಡು ನಿಂತಿದ್ದ. ಮಾಸಿದ ಅಂಗಿ ಹರಿದ ಚಪ್ಪಲಿ ಬಡತನದ ಕುರುಹು ಕಾಣಾ¤ ಇತ್ತು . ಬಸ್ಸಿನ ವಾಲುವಿಕೆ ಅವನಿಗೆ ನಿಲ್ಲುವದಕ್ಕೂ ಕಷ್ಟ ಆಗ್ತಾ ಇತ್ತು.
ಎದ್ದು ಸೀಟ್ ಬಿಟ್ ಕೊಡ್ಲಾ ಅಂದ್ಕೊಂಡೆ. ಆದ್ರೆ ಆವತ್ಯಾಕೋ ಒಂತರಾ ಸುಸ್ತು ಮಧ್ಯಾಹ್ನ ಬಿಸಿಲು. ಹೊಟ್ಟೆ ಬೇರೆ ರ್ಚು ಅಂತಾ ಇದ್ದಿದ್ರಿಂದ ಇರೊ ಸೀಟ್ ಬಿಟ್ಕೊಟ್ಟು ಒಳ್ಳೆಯವಳಾಗೋ ಮೂಡ್ ಇರ್ಲಿಲ್ಲ . ಆದ್ರೂ ಅಜ್ಜನನ್ನು ನೋಡ್ತಿದ್ರೆ ಬೇಜಾರಾಗ್ತಾ ಇತ್ತು.
ವೃದ್ಧರು, ಅಶಕ್ತರು, ಅಸಹಾಯಕರು, ಅಂಗವಿಕಲರು, ಮಕ್ಕಳು, ಬಡವರು, ಭಿಕ್ಷುಕರು ಇಂಥವರೆಲ್ಲ ಚಿಕ್ಕಂದಿನಿಂದಲೂ ನನ್ನ ವೀಕ್ನೆಸ್. ಅಂಥವರ ಅಸಹಾಯಕತೆ ನೋಡಿದಾಗ ಮನಸ್ಸು ಹಿಂಡಿದಂತಾಗುತ್ತೆ. ನನ್ನಿಂದಾಗುವ ಸಹಾಯ ಮಾಡದೇ ಇರಲಾಗುವುದೇ ಇಲ್ಲ. ಹಿಂದಿನ ಸೀಟ್‌ನಲ್ಲಿ ಕಿವಿಗೆ ಇಯರ್ ಫೋನ್ ಹಾಕ್ಕೊಂಡು, ಮಧ್ಯೆ ಮಧ್ಯೆ ಕುರ್‌ಕುರೆ ತಿಂತಾ ಆರಾಮಾಗಿ ಕೂತಿರುವವನ ಹತ್ರ “ಸ್ವಲ್ಪ ಅಜ್ಜನಿಗೆ ಸೀಟ್ ಕೊಡ್ತೀರಾ?’ ಅಂತ ಕೇಳ್ಳೋಣ ಅಂದ್ಕೊಂಡೆ. “ಅಷ್ಟೆಲ್ಲ ಒಳ್ಳೆತನ ಇದ್ರೆ ನಿಮ್ ಸೀಟೇ ಕೊಡ್ರೀ’ ಅಂದ್ಬಿಟ್ರೆ ನಂಗೇ ಅವಮಾನ ಅಲ್ವಾ ಅಂತ ಸುಮ್ನಾದೆ.
ಅಜ್ಜ ಆಕಡೆ ಈ ಕಡೆ ವಾಲಾಡ್ತಾನೇ ಇದ್ದ . ಸುಮಾರು ಕಾಲೇಜ್ ಹುಡುಗರು ಇದ್ರೂ ಯಾರೂ ಸೀಟ್ ಕೊಡೋ ಮನಸ್ಸೇ ಮಾಡಲಿಲ್ಲ. ಸರಿ ಅಂತ ನಾನೇ ಎದ್ದು ನಿಂತು “ಅಜ್ಜ ಕೂತ್ಕೊಳ್ಳಿ’ ಅಂದೆ. ಅಜ್ಜನ ಮುಖದಲ್ಲಿ ಸಮಾಧಾನದ ಭಾವ. “ತುಂಬಾ ಉಪಕಾರ ಆಯ್ತು ತಾಯೀ’ ಅಂತ ಕೈ ಮುಗ್ದ. ಇರ್ಲಿ ಬಿಡಿ ಅಂತ ಬ್ಯಾಗ್‌ನಲ್ಲಿದ್ದ ಒಂದು ಕಿತ್ತಳೆ ಹಣ್ಣು ತೆಗ್ದು ಕೊಟ್ಟೆ. ಖುಷಿಯಿಂದ ತಿಂದ .
ನಂಗೆ ಮಾತ್ರ ಮನೆಯವರೆಗೂ ಸೀಟು ಸಿಗಲೇ ಇಲ್ಲ ಮಕ್ಕಾಲು ಗಂಟೆ ನಿಂತೇ ಬಂದೆ . ಆವತ್ತಿನ ಮಟ್ಟಿಗೆ ಸ್ವಲ್ಪ ನೆಗಡಿ ಶೀತದ ಕಿರಿಕಿರಿ ಇದ್ದಿದ್ರಿಂದ ನಿಂತು ಬರುವುದು ತುಂಬಾ ಕಷ್ಟ ಆಯ್ತು. ತಲೆ ಭಾರವಾಗಿ ಸುತ್ತುತ್ತಾ ಇತ್ತು.
ಯೋಚಿಸ್ತಾ ಇದ್ದೆ; ಕೆಲವೊಮ್ಮೆ ಈ ಆದರ್ಶಗಳು, ಒಳ್ಳೆಯತನಗಳು ನಮ್ಮನ್ನು ಕಷ್ಟಕ್ಕೆ ಸಿಲುಕಿಸುತ್ತಲ್ವಾ ಅಂತ. ಆದ್ರೂ, ಅವತ್ತು ಅಜ್ಜನಿಗೆ ಸೀಟ್ ಕೊಡದೇ ಇದ್ದಿದ್ರೆ ನನ್ ಮನಸ್ಸಿನಲ್ಲಿ ಒಂದು ಗಿಲ್ಟ… ಉಳಿದೇ ಹೋಗ್ತಿತ್ತು. ಸ್ವಾರ್ಥಿಯಾದೆ ಅನ್ನಿಸಿಬಿಡ್ತಿತ್ತು. ಅಜ್ಜನ ಕಣ್ಣಲ್ಲಿನ ಖುಷಿ ನನಗೆ ದಕ್ಕುತ್ತಲೇ ಇರಲಿಲ್ಲ. ಹಾಗನ್ನಿಸಿದಾಗ ಆದ ಸಮಾಧಾನದ ಮುಂದೆ ದೇಹಕ್ಕಾದ ತೊಂದರೆ ದೊಡ್ಡದೆನಿಸಲಿಲ್ಲ.
ಯಾರೋ ನಮ್ಮನ್ನು ಹೊಗಳಲಿ ಅನ್ನೋದ್ಕಿಂತ ನಮ್ಮದೇ ಆತ್ಮತೃಪ್ತಿಗಾಗಿ ಕೆಲವು ಸಣ್ಣಪುಟ್ಟ ಆದರ್ಶ, ಪ್ರಾಮಾಣಿಕತೆ ಮತ್ತು ಒಳ್ಳೆಯತನಗಳನ್ನು ಬೆಳೆಸಿಕೊಳ್ಳಬೇಕು. ನಾವು ಮಾಡುವ ಸಣ್ಣ ಸಹಾಯ, ಪಡೆದವರಿಗಿಂತ ನಮಗೇ ಹೆಚ್ಚು ಖುಷಿ ಕೊಡುತ್ತದೆ.
-ಜ್ಯೋತಿ ಗಾಂವಕರ್