ಬೆಂಗಳೂರು: ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 46 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ನನ್ನ ರಾಜಕೀಯ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೂ ಕಾರಣವಾಗಿದೆ. ನಾನು ಕೆಲ ಬೆಳವಣಿಗೆಗಳಿಂದ ಬೇಸತ್ತು, ಸ್ವಇಚ್ಛೆಯಿಂದ ರಾಜೀನಾಮೆ ನೀಡಬೇಕಾಯಿತು ಎಂದರು.
ನಾನು ಕೆ.ಸಿ.ವೇಣಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಎಲ್ಲವನ್ನೂ ಅವರಿಗೆ ಹೇಳಿದ್ದೇನೆ, ಅವರಿಗೆ ಎಲ್ಲವೂ ಗೊತ್ತಿತ್ತು ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆಫೋನ್ ಮೂಲಕ ಮಾತನಾಡಿದ್ದೇನೆ, ಎಲ್ಲಾ ವಿದ್ಯಮಾನಗಳು ಅವರಿಗೂ ಗೊತ್ತಿತ್ತು. ಏನಾಗಲಿದೆ ಎನ್ನುವುದು ಮುಂದಕ್ಕೆ ಗೊತ್ತಾಗುತ್ತದೆ ಎಂದು ಕುತೂಹಲ ಮೂಡಿಸಿದರು.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ 13ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕುಮಾರಸ್ವಾಮಿ ಸರಕಾರವನ್ನು”ಅಲ್ಪ ಮತ’ಕ್ಕೆ ಬೀಳಿಸಿದ್ದಾರೆ. ಹೆಚ್ಚಿನ ಶಾಸಕರು ಮುಂಬಯಿಗೆ ತೆರಳಿ ಹೊಟೇಲ್‌ನಲ್ಲಿ ತಂಗಿದ್ದಾರೆ.