ಕಲಬುರಗಿ: ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ ಕಲಬುರಗಿ, ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಡೇ ಕಾರ್ಯಕ್ರಮವನ್ನು ಪಕ್ಷಿ ಪ್ರಾಣಿಗಳ ಉಳಿವಿಗಾಗಿ ಅರವಟ್ಟಿಗೆಗಳನ್ನು (ಮಡಿಕೆಗಳನ್ನು) ಮರಗಳಿಗೆ ಕಟ್ಟಿ ನೀರು ಹಾಕುವ ಮುಖಾಂತರ ವಿಭಿನ್ನವಾಗಿ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಪೋಲಿಸ್ ಠಾಣೆ, ಡಿ. ದೇವರಾಜ ಅರಸು ಸ್ನಾತಕೋತ್ತರ ಬಾಲಕರ ಬಾಲಮಂದಿರ, ಅಂಬೇಡ್ಕರ್ ವಸತಿ ನಿಲಯದ ಮುಂಭಾಗದಲ್ಲಿ ಮರಗಳಿಗೆ ಅರವಟ್ಟಿಗೆಗಳನ್ನು ಕಟ್ಟುವ ಮೂಲಕ ಪಕ್ಷಿ-ಪ್ರಾಣಿಗಳಿಗೆ ನೀರುಣಿಸುವ ಕಾರ್ಯವನ್ನು ಪರಿಸರ ಸಂರಕ್ಷಣಾ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮಾಡಿದರು.
ಇದೇ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯ ವೃತ್ತ ಆರಕ್ಷಕ ನೀರಿಕ್ಷರಾದ ಶಿವಾನಂದ ಘಾಣಿಗೇರ್ ಮಾತನಾಡಿ, ಈ ಉರಿ ಬಿಸಿಲಿನ ನಡುವೆ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು. ಈ ಕುರಿತು ಎಲ್ಲೆಡೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣ ಪರಪ್ಪಗೋಳ ಜೋಗೂರ ಮಾತನಾಡಿ, 5 ವರ್ಷಗಳಿಂದ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಡೇ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಏಪ್ರಿಲ್ ಫೂಲ್ ಮಾಡಿ ಮತ್ತೂಬ್ಬರನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುವ ಬದಲು ಏಪ್ರಿಲ್ ಕೂಲ್ ಡೇ ಮಾಡಿ ಪಕ್ಷಿ ಪ್ರಾಣಿಗಳಿಗೆ ನೀರಿಡುವ ಹಾಗೂ ಆಹಾರ ಧಾನ್ಯಗಳನ್ನು ಇಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.
ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯ ಪಿಎಸ್‌ಐ ಯಶೋಧಾ ಕಟಕೆ ಮಾತನಾಡಿದರು. ಗಣೇಶ ಚವ್ಹಾಣ, ಶಾಂತಲಿಂಗ ನಿಗದಿ, ಆಂಜನೇಯ ಪವಾರ, ದೀಪಕ್ ಗಾಯಕವಾಡ, ವಿಜಯಕುಮಾರ ಹಾಬಾನೂರ, ದಿಲೀಪ್ ಚವ್ಹಾಣ, ಮಾಣೀಕ್ ಜಮಾದಾರ,, ವಿಶ್ವನಾಥ, ರೇಣಕರಾಜ, ಜಗನ್ನಾಥ, ಬಸನಗೌಡ, ರಾಮ್, ಹಣಮಂತಗೌಡ, ಶ್ರೀಮಂತ, ಸೋನು, ಪ್ರದೀಪ ಮುಂತಾದವರಿದ್ದರು.