Advertisement

ಮೀನು ಮಾರುಕಟ್ಟೆ ಬಿಟ್ಟು ಕೊಡಿ

02:49 PM Jun 25, 2019 | Team Udayavani |

ಕಾರವಾರ: ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಾತ್ಕಲಿಕ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಕಷ್ಟ. ಮಳೆಗಾಲದಲ್ಲಿ ಸಮಸ್ಯೆ ಉಲ್ಬಣವಾಗಿದೆ. ತಕ್ಷಣ ನೂತನ ಮೀನು ಮಾರುಕಟ್ಟೆ ಕೆಲಸ ಮುಗಿಸಿ ಬಿಟ್ಟುಕೊಡಿ ಎಂದು ಮೀನು ಮಾರಾಟ ಮಹಿಳಾ ಸಂಘದ ಸದಸ್ಯೆಯರು ಬೃಹತ್‌ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

Advertisement

ಹಲವು ಸಲ ಮೀನು ಮಾರುಕಟ್ಟೆ ಸಮಸ್ಯೆ ಹೇಳಿದ್ದೇವೆ. ಗಾಂಧಿ ಮಾರುಕಟ್ಟೆ ವಶಪಡಿಸಿಕೊಂಡು ಹಠಾತ್‌ ಪ್ರತಿಭಟನೆ ಸಹ ಮಾಡಿದ್ದೇವೆ. ಆದರೂ ನಗರಸಭೆ ನಮ್ಮ ಅಳಲು ಕೇಳುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಮೀನುಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಹೇಳಿದರು. ಇದೇ ತಿಂಗಳಾಂತ್ಯದಲ್ಲಿ ಮೀನು ಮಾರುಕಟ್ಟೆ ಬಿಟ್ಟುಕೊಡಿ. ಇಲ್ಲದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದರು. ಇಲ್ಲವೇ ನಗರದ ರಸ್ತೆಗಳಲ್ಲಿ ಮೀನು ಮಾರಾಟಕ್ಕೆ ಅವಕಾಶಕೊಡಿ. ಹೆದ್ದಾರಿ ಆಚೆ ಕುಳಿತು ಮೀನು ವ್ಯಾಪಾರ ಸಾಧ್ಯವಿಲ್ಲ ಎಂದು ಹೋರಾಟಗಾರರು ಹೇಳಿದರು.

ಇದಕ್ಕೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಧ್ವನಿಗೂಡಿಸಿದರು. ಈಗಲೇ ನೂತನ ಮೀನು ಮಾರುಕಟ್ಟೆಯಲ್ಲಿ ಕುಳಿತುಕೊಳ್ಳಿ ಎಂದು ಮಾಜಿ ಶಾಸಕ ಸತೀಶ್‌ ಸೈಲ್ ಹೇಳಿದರು. ಈ ಹಂತದಲ್ಲಿ ಮಾತಿಗೆ ಮಾತು ಬೆಳೆಯಿತು. ಆಗ ಶಾಸಕರನ್ನು ಫಿಶ್‌ ಫೆಡರೇಶನ್‌ ಅಧ್ಯಕ್ಷ ಗಣಪತಿ ಮಾಂಗ್ರೆ ಸಮಾಧಾನ ಪಡಿಸಲು ಮುಂದಾದರು. ಆಗ ಮಾಜಿ ಶಾಸಕರು ಮೀನು ಮಾರಾಟ ಮಹಿಳೆಯರ ಪರ ಜೋರಾಗಿ ಮಾತನಾಡಿದರು. ಪ್ರತಿಭಟನೆ ವೇಳೆ ಬಂದ ಪಿಸು ಮಾತು ಮಾಜಿ ಶಾಸಕ ಸೈಲ್ರನ್ನು ಕೆರಳಿಸಿತ್ತು. ಜಿಲ್ಲಾಧಿಕಾರಿ ಹಾಲಿ ಮತ್ತು ಮಾಜಿ ಶಾಸಕರನ್ನು ಸಮಾಧಾನ ಮಾಡಿದರು. ಈ ಹಂತದಲ್ಲಿ ಜೆಡಿಎಸ್‌ ಮುಖಂಡ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಹಾಲಿ ಶಾಸಕರ ಅಧ್ಯಕ್ಷತೆಯಲ್ಲಿ ಇಂದೇ ಸಂಜೆ ಸಭೆ ಮಾಡಿ ಒಂದು ತಿರ್ಮಾನಕ್ಕೆ ಬನ್ನಿ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ, ನಾನು ಮೀನುಗಾರರ ಪರ ಎಂದು ಬಿಟ್ಟರು.

ಕಗ್ಗಂಟಾದ ಸಮಸ್ಯೆ: ಆದರೆ ಸಮಸ್ಯೆ ಅಷ್ಟು ಬೇಗ ಬಗೆ ಹರಿಯುವಂತಹದ್ದಲ್ಲ ಎಂದು ಮಾರ್ಕೆಟ್ ನಿರ್ಮಾಣದ ಬೆಳವಣಿಗೆ ಬಿಚ್ಚಿಟ್ಟರು ಜಿಲ್ಲಾಧಿಕಾರಿ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕೆಲವರು ತಡೆ ತಂದಿದ್ದಾರೆ. ವಿವಾದ ಕೋರ್ಟನಲ್ಲಿದೆ. ಸಮಸ್ಯೆ ಕೋರ್ಟನಲ್ಲಿ ಇರುವಾಗ ನಾವು ಮೀನುಗಾರರಿಗೆ ಮೀನು ಮಾರಾಟ ಮಾಡಿ ಎಂದು ಹೇಳಿದರೆ ತಪ್ಪಾಗುತ್ತದೆ. ಮೀನುಗಾರರ ಸಮಸ್ಯೆಯೂ ಬಗೆಹರಿಯಬೇಕು. ಕಟ್ಟಡದ ಕಾಮಗಾರಿಯೂ ನಡೆಯಬೇಕು. ಸಮಸ್ಯೆ ನನಗೆ ಗೊತ್ತಿದೆ. ಇದೇ 27ಕ್ಕೆ ಹೈಕೋರ್ಟ್‌ ನಿಲುವು ಪ್ರಕಟವಾಗಲಿದೆ. ಅದನ್ನು ನೋಡಿಕೊಂಡು, ಮೀನುಗಾರರಿಗೆ ಮಳೆಗಾಲವಾದ್ದರಿಂದ ತಾತ್ಕಾಲಿಕ ಪರಿಹಾರ ಮಾಡಬೇಕು. ಮತ್ತು ಅವರಿಗೆ ಶಾಶ್ವತ ಮೀನು ಮಾರುಕಟ್ಟೆ ಸಹ ಮಾಡಿಕೊಡಬೇಕಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಬಗೆಹರಿಸಲಾಗುವುದು.

ನೂತನ ವಾಣಿಜ್ಯ ಸಂಕೀರ್ಣ: ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಹರೀಶ್‌ ಕುಮಾರ್‌ , ವಾಣಿಜ್ಯ ಸಂಕೀರ್ಣ ಐಡಿಎಸ್‌ಎಮ್‌ಟಿ ನಿಧಿಯಲ್ಲಿ ಕಟ್ಟಲಾಗುತ್ತಿದೆ. ನಗರೋತ್ಥಾನದ ನಿಧಿ ಬಳಸಲು ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿ ಸಭೆಯಲ್ಲಿ ನಿರ್ಧಾರವಾಗಬೇಕು. ಸಮಿತಿ ನಿರ್ಧರಿಸಿದ ನಂತರ ಸರ್ಕಾರಕ್ಕೆ ಬರೆದು ಅನುಮತಿ ಪಡೆಯಬೇಕು. ಅಲ್ಲದೇ ಮೀನುಗಾರ ಮಹಿಳೆಯರ ಮೀನು ಮಾರಾಟಕ್ಕೆ ಶಾಶ್ವತ ಪರಿಹಾರ ಸಹ ಹುಡುಕುತ್ತೇನೆ. ನೂತನ ಮೀನು ಮಾರುಕಟ್ಟೆ ಪರ ತೀರ್ಪು ಬಂದಲ್ಲಿ ಏನು ಮಾಡಬೇಕು. ಬರದಿದ್ದರೆ ಏನು ಮಾಡಬೇಕು ಎಂಬುದು ಜೂ.27 ರ ನಂತರ ನಿರ್ಧಾರವಾಗಲಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರ ಗಮನಕ್ಕೆ ತಂದು, ಅವರ ಸಮ್ಮುಖದಲ್ಲಿ ಸಭೆ ಮಾಡಿ ನಿರ್ಧಾರಕ್ಕೆ ಬರಲಾಗುವುದು. ಮಳೆಗಾಲದ ಸಮಸ್ಯೆ ನನಗೂ ಗೊತ್ತಿದೆ. ನೀವು ಸಹಕಾರ ಕೊಡಿ. ಸಮಸ್ಯೆ ಬಗೆಹರಿಸುವೆ ಎಂದರು.

Advertisement

ಕೆ.ಟಿ. ತಾಂಡೇಲ, ಆರ್‌.ಜಿ. ನಾಯ್ಕ, ರಾಜು ತಾಂಡೇಲ, ಮೀನು ಮಾರಾಟ ಮಹಿಳಾ ಸಂಘದ ಸದಸ್ಯರು ಇದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next