ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರ ವಿಚಾರವಾಗಿ ಕೊನೆಯ ಪ್ರಯತ್ನಕ್ಕೆ ಕೈ ಹಾಕಿರುವ ಕೇಂದ್ರ ಸರಕಾರವು ವಿವಾದರಹಿತ 67 ಎಕರೆ ಭೂಮಿಯನ್ನು ಮಾಲಕರಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ವಿವಾದಿತವಲ್ಲದ 67 ಎಕರೆ ಭೂಮಿಯು 2.77 ಎಕರೆ ವಿವಾದಿತ ಭೂಮಿಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಪ್ರಮುಖವಾಗಿದ್ದು, ಮಾಲಕರಿಗೆ ಹಸ್ತಾಂತರಿಸಬಹುದಾಗಿದೆ ಎಂದು ಕೇಂದ್ರ ಸರಕಾರ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂದು ವೇಳೆ ಕೇಂದ್ರದ ಮನವಿಗೆ ಸುಪ್ರೀಂ ಕೋರ್ಟ್ ಒಪ್ಪಿದ್ದೇ ಆದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಡ ನಿರ್ಮಾಣ ಕಾರ್ಯ ಶುರು ವಾಗಲಿದೆ. ಕೇಂದ್ರದ ನಡೆಯನ್ನು ಸ್ವಾಗತಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಒಪ್ಪಿಗೆ ಸಿಕ್ಕಿದ ಕೂಡಲೇ ರಾಮಜನ್ಮಭೂಮಿ ನ್ಯಾಸ್‌ನಿಂದ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಸರಕಾರವೂ ಇದೇ ಮಾತುಗಳನ್ನಾಡಿದೆ.
1991ರಲ್ಲಿ ರಾಮ ಜನ್ಮಭೂಮಿ ನ್ಯಾಸ್ ಮಂಡಳಿ ಮತ್ತು ಇತರ ಸಂಸ್ಥೆ ಗಳಿಂದ ಈ ಭೂಮಿಯನ್ನು ವಶ ಪಡಿಸಿಕೊಳ್ಳಲಾಗಿತ್ತು. ಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸು ತ್ತಿರುವ ರಾಮಜನ್ಮಭೂಮಿ ನ್ಯಾಸ್ ಮಂಡಳಿಯು 67 ಎಕರೆ ಪೈಕಿ 42 ಎಕರೆ ಹೊಂದಿದೆ. ಅಲ್ಲದೆ 2003ರಲ್ಲಿ ಈ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರಕಾರ ಕೋರಿದೆ.
ಈ ಹಿಂದೆ 1994ರಲ್ಲಿ ಇಸ್ಮಾಯಿಲ್ ಫರೂಕಿ ಕೇಸ್‌ನಲ್ಲಿ ವಿವಾದಿತ 0.313 ಎಕರೆ ಭೂಮಿಯನ್ನು ಹೊರತುಪಡಿಸಿ ವಿವಾದಿತವಲ್ಲದ ಎಲ್ಲ ಭೂಮಿಯನ್ನು ಕೇಂದ್ರ ಸರಕಾರ ಬಯಸಿದರೆ ವಾಪಸು ಮಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂಬುದನ್ನೂ ಕೇಂದ್ರ ಸರಕಾರ ತನ್ನ ದಾವೆಯಲ್ಲಿ ಉಲ್ಲೇಖೀಸಿದೆ. ಹೆಚ್ಚುವರಿ ಭೂಮಿಯನ್ನು ನಮ್ಮ ವಶದಲ್ಲಿಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಇದನ್ನು ಮೂಲ ಮಾಲಕರಿಗೆ ಹಸ್ತಾಂತರಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ.
ಹಿಂದೂ ಸಂಘಟನೆಗಳಿಂದ ಶ್ಲಾಘನೆ
ಸರಕಾರದ ನಿರ್ಧಾರಕ್ಕೆ ಹಿಂದೂ ಪರ ಸಂಘಟನೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಈ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ ಖರೀದಿಸಿತ್ತು. ಹೀಗಾಗಿ ಆ ಸಂಸ್ಥೆಗೆ ಇದನ್ನು ವಾಪಸ್ ಮಾಡುವುದು ಸೂಕ್ತ ನಿರ್ಧಾರ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರಕಾರದ ನಿರ್ಧಾರವನ್ನು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ ಕೂಡ ಸ್ವಾಗತಿಸಿದ್ದಾರೆ. ಈ ಭೂಮಿಗೂ ರಾಮಜನ್ಮಭೂಮಿ ವಿವಾದಕ್ಕೂ ಸಂಬಂಧವಿಲ್ಲ. ಇದನ್ನು 1993ರಲ್ಲಿ ರಾಮಜನ್ಮಭೂಮಿ ನ್ಯಾಸ್ ಮಂಡಳಿ ಯಿಂದ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ರಾಮಜನ್ಮಭೂಮಿ ನ್ಯಾಸ್
1993ರಲ್ಲಿ ರಾಮ ಜನ್ಮಭೂಮಿ ನ್ಯಾಸ್ ಎಂಬ ಸಂಘಟನೆಯನ್ನು ವಿಶ್ವ ಹಿಂದೂ ಪರಿಷತ್ ಸದಸ್ಯರು ಸೇರಿ ಸ್ಥಾಪಿಸಿದ್ದರು. ಈ ಭಾಗದ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ನ್ಯಾಸ್ ಸಮಿತಿ ರಚಿಸಲಾಗಿತ್ತು. ಅಂದಿನಿಂದಲೇ ರಾಮಮಂದಿರ ನಿರ್ಮಾಣ ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತಾದರೂ ಅದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. 1913ರಿಂದ 2003ರ ವರೆಗೆ ಈ ಸಮಿತಿಗೆ ರಾಮಚಂದ್ರ ದಾಸ್ ಪರಮಹಂಸ ಮುಖ್ಯಸ್ಥರಾಗಿದ್ದರು.