Advertisement

‘ಮೂಲ್ಕಿ ವಾಹನಗಳಿಗೆ ಟೋಲ್‌ ವಿನಾಯಿತಿ ನೀಡಿ’

05:29 AM Feb 06, 2019 | Team Udayavani |

ಮೂಲ್ಕಿ: ಹೆದ್ದಾರಿಯ ಅಗತ್ಯ ಸೌಕರ್ಯದ ಕಾಮಗಾರಿಯನ್ನು ಪೂರ್ಣ ಗೊಳಿಸದೆ ಟೋಲ್‌ ಸಂಗ್ರಹ ಮಾಡುವ ನವಯುಗ ಸಂಸ್ಥೆಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆಯ ಮೂಲಕ ಇಟ್ಟಿರುವ ಬೇಡಿಕೆಗೆ ಸ್ಪಂದಿಸಿ. ಜನತೆ ಸಹನೆಯನ್ನು ಪರೀಕ್ಷಿಸದೆ ಮೂಲ್ಕಿ ಪರಿಸರದ 5 ಕಿ.ಮೀ. ವ್ಯಾಪ್ತಿಯ ವಾಹನ ಗಳಿಗೆ ಟೋಲ್‌ ವಿನಾಯಿತಿಯನ್ನು ನೀಡು ವುದು ಸೂಕ್ತ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹೇಳಿದರು.

Advertisement

ಹೆಜಮಾಡಿಯ ಟೋಲ್‌ ಪ್ಲಾಜಾದಲ್ಲಿ ಮೂಲ್ಕಿಯ ಜನರಿಂದ ಸಂಗ್ರಹಿಸಲಾ ಗುತ್ತಿರುವ ಟೋಲ್‌ನ್ನು ವಿರೋಧಿಸಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ನೇತೃತ್ವದಲ್ಲಿ ನಡೆದ ಮೂಲ್ಕಿ ಬಂದ್‌ ಮತ್ತು ಪ್ರತಿಭಟನ ರ್ಯಾಲಿಗೆ ಮೂಲ್ಕಿಯ ಬಸ್‌ ನಿಲ್ದಾಣದ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

ಸಂಪೂರ್ಣ ಬೆಂಬಲ
ಮೂಲ್ಕಿಯ ಸಾರ್ವಜನಿಕರ ಬೇಡಿಕೆ ನ್ಯಾಯಯುತವಾದುದು. ನವಯುಗ ಸಂಸ್ಥೆಯು ಉದ್ಧಟತನದ ವರ್ತನೆಯನ್ನು ಪುನರಾವರ್ತಿಸದೆ ಟೋಲ್‌ ಸಂಗ್ರಹಿ ಸುವುದನ್ನು ಕೈಬಿಡುವುದು ಸೂಕ್ತ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿ, ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ಕಾಮಗಾರಿ ಪೂರ್ಣವಾಗದೆ ಟೋಲ್‌ ಸಂಗ್ರಹ ಸಲ್ಲದು
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ನವಯುಗ ಸಂಸ್ಥೆಯ ಮೂಲಕ ಆಗಬೇಕಾದ ಅನೇಕ ಕಾಮಗಾರಿಗಳನ್ನು ತತ್‌ಕ್ಷಣದಿಂದ ಮಾಡಿ ಮುಗಿಸುವ ಬದಲು ಟೋಲ್‌ ಸಂಗ್ರಹ ಮಾಡುವುದು ಸೂಕ್ತವಲ್ಲ. ಜನರ ಭಾವನೆಯನ್ನು ಗೌರವಿ ಸುವುದು ಮುಖ್ಯ ಎಂದು ಹೇಳಿದರು.

ಮೂಲ್ಕಿ ಚರ್ಚ್‌ನ ಧರ್ಮಗುರು ವಂ| ಸಿಲ್ವೆಸ್ಟರ್‌ ಡಿ’ಕೋಸ್ತಾ, ಸಿ.ಎಸ್‌.ಐ. ಚರ್ಚ್‌ ನ ಸಭಾ ಪಾಲಕ ಎಡ್ವರ್ಡ್‌ ಕರ್ಕಡ, ಮೂಲ್ಕಿ ಮಸೀದಿ ಗುರುಗಳಾದ ಎಸ್‌.ಬಿ. ದಾರಿಮಿ, ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್‌ ಆಳ್ವ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಮಿತಿಯ ಅಧ್ಯಕ್ಷ ಹರೀಶ್‌ ಪುತ್ರನ್‌, ಪದಾಧಿಕಾರಿಗಳಾದ ಧನಂಜಯ ಮಟ್ಟು ಜೀವನ್‌ ಶೆಟ್ಟಿ, ಸತ್ಯೇಂದ್ರ ಶೆಣೈ, ಇಕ್ಬಾಲ್‌ ಅಹಮ್ಮದ್‌, ದಿನೇಶ್‌ ಹೆಗ್ಡೆ ಉಳೆಪಾಡಿ, ಮಧು ಆಚಾರ್ಯ, ದೇವಪ್ರಸಾದ್‌ ಪುನರೂರು, ರಂಗನಾಥ ಶೆಟ್ಟಿ, ಬಿ.ಎಂ. ಆಸೀಫ್‌, ಸತೀಶ್‌ ಅಂಚನ್‌, ಸುಶೀಲ್‌ ಬಂಗೇರ, ದೆಪ್ಪುಣಿಗುತ್ತು ಕಿಶೋರ್‌ ಶೆಟ್ಟಿ, ಡಾ| ಎಂ.ಎ.ಆರ್‌. ಕುಡ್ವಾ, ಮನೀರ್‌ ಕಾರ್ನಾಡ್‌, ಹರ್ಷರಾಜ್‌ ಶೆಟ್ಟಿ, ಭಾಸ್ಕರ ಹೆಗ್ಡೆ, ವಸಂತ ಬೆರ್ನಾರ್ಡ್‌, ವೆಂಕಟೇಶ್‌ ಹೆಬ್ಟಾರ್‌, ಲಯನ್ಸ್‌ ಅಧ್ಯಕ್ಷ ಸದಾಶಿವ ಹೊಸದುರ್ಗ, ರೋಟರಿ ಅಧ್ಯಕ್ಷ ನಾರಾಯಣ, ಲಯನ್ಸ್‌ ಮಾಜಿ ಅಧ್ಯಕ್ಷ ಕಿಶೋರ್‌ ಶೆಟ್ಟಿ, ಸುಶೀಲ್‌ ನೋರೋಹ್ನ, ಕಿಶೋರ್‌ ಸಾಲ್ಯಾನ್‌, ಶ್ರೀಪತಿ ಉಪಾಧ್ಯಾಯ, ಪ್ರಮೋದ್‌ ಕುಮಾರ್‌, ಪ್ರಶಾಂತ್‌ ಕಾಮತ್‌ ಉಪಸ್ಥಿತರಿದ್ದರು.

Advertisement

ಹೆಜಮಾಡಿ: ಪ್ರತಿಭಟನ ಸಭೆ
ಹೆಜಮಾಡಿಯ ನವಯುಗ ಟೋಲ್‌ ಪ್ಲಾಝಾದ ಬಳಿ ಶಾಂತಿಯುತ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಮಾತನಾಡಿ, ನವಯುಗ ಟೋಲ್‌ ಅಕ್ರಮ ಹಾಗೂ ಜನತೆಯ ಹಕ್ಕಿನ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ತಾನು ಕರಾವಳಿಭಾಗದ ಶಾಸಕರ ನೆರವಿನೊಂದಿಗೆ ವಿಧಾನ ಪರಿಷತ್‌ ಹಾಗೂ ವಿಧಾನಸಭೆಗಳಲ್ಲಿ ನವಯುಗ ಕಂಪೆನಿ ವಿರುದ್ಧ ನಿಲುವಳಿ ಸೂಚನೆಯನ್ನು ಮಂಡಿಸುವುದಾಗಿ ಹೇಳಿದರು.

ತೀವ್ರಗಾಮಿಗಳಾಗುವುದಕ್ಕೆ ಅವಕಾಶ ನೀಡಬೇಡಿ
ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಶಾಂತಿಯುತ ಪ್ರತಿಭಟನೆಯನ್ನು ನಡೆಸುವ ಈ ಜಿಲ್ಲೆಯ ಜನರು ತೀವ್ರಗಾಮಿಗಳಾಗುವುದಕ್ಕೆ ನವಯುಗ ನಿರ್ಮಾಣ ಕಂಪೆನಿ ಅವಕಾಶ ನೀಡಬಾರದು. ಮೂಲ್ಕಿಯ ಜನತೆಗೆ ಸುಂಕ ವಿನಾಯಿತಿಯನ್ನು ನೀಡಲೇಬೇಕು ಎಂದು ಅವರು ಹೇಳಿದರು.

ಮೂಲ್ಕಿ ಸಂಪೂರ್ಣ ಬಂದ್‌
ಸರಕಾರಿ ಕಚೇರಿ, ಬ್ಯಾಂಕ್‌, ಅಂಚೆ ಕಚೇರಿ, ವಿಮಾ ಕಚೇರಿ ಮೂಲ್ಕಿ ಮತ್ತು ಕಾರ್ನಾಡಿನ ಎಲ್ಲ ಕಾರು, ರಿಕ್ಷಾ ಚಾಲಕರು, ವ್ಯಾಪಾರಿಗಳು ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಸಂಪೂರ್ಣ ಬಂದ್‌ ಮಾಡಿದರು. ಮೂಲ್ಕಿಯಿಂದ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಹೆಜಮಾಡಿ ಟೋಲ್‌ನತ್ತ ಪ್ರತಿಭಟನ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಮತ್ತು ಅಭಯಚಂದ್ರ ಜೈನ್‌ ಅವರು ಮೆರವಣಿಗೆಯಲ್ಲಿ ಸಾರ್ವಜನಿಕರೊಂದಿಗೆ ಪಾದಯಾತ್ರೆ ನಡೆಸಿದರು.

ಪೊಲೀಸ್‌ ಬಂದೋಬಸ್ತ್  
ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರ ಉಸ್ತುವಾರಿಯನ್ನು ಕಾರ್ಕಳದ ಸಹಾಯಕ ಪೊಲೀಸ್‌ ಅಧೀಕ್ಷಕ ಕೃಷ್ಣ ಕಾಂತ್‌, ಕಾಪು ಸಿಪಿಐ ಮಹೇಶ್‌ ಪ್ರಸಾದ್‌ ವಹಿಸಿದ್ದರು. ಜಿಲ್ಲಾ ಮೀಸಲು ಪಡೆ ಪೊಲೀಸ್‌ ತುಕಡಿ, ಅಗ್ನಿಶಾಮಕ ದಳದ ಸಿಬಂದಿ, ಪಡುಬಿದ್ರಿ ಪೊಲೀಸ್‌ ಠಾಣಾ ಸಿಬಂದಿ ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next