Advertisement

ನಿಷ್ಠಾವಂತರಿಗೆ ಟಿಕೆಟ್ ಕೊಡಿ

05:12 PM May 06, 2019 | Team Udayavani |

ಮಾಲೂರು: ಪುರಸಭೆ ಚುನಾವಣೆಯಲ್ಲಿ ನಿಷ್ಠಾವಂತರಿಗೆ ಮಾತ್ರ ಟಿಕೆಟ್ ನೀಡಬೇಕು. ಅವಕಾಶವಾದಿಗಳಿಗೆ ಮಣೆ ಹಾಕದಂತೆ ಬಿಜೆಪಿ ಕಾರ್ಯಕರ್ತರು ನಾಯಕರಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ಬಸವೇಶ್ವರ ದೇಗುಲ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅಧ್ಯಕ್ಷತೆಯಲ್ಲಿ, ವರಿಷ್ಠ ಸಚ್ಚಿದಾನಂದಮೂರ್ತಿ ಸಮ್ಮುಖದಲ್ಲಿ ಕಾರ್ಯಕರ್ತರು ಮತ್ತು ಪುರಸಭೆ ಚುನಾವಣೆ ಆಕಾಂಕ್ಷಿಗಳ ಸಭೆ ನಡೆಯಿತು. ಸಭೆ ಅರಂಭವಾಗುತ್ತಿದ್ದಂತೆ ಲೋಕಸಭೆ ಚುನಾವಣೆ ವೇಳೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬದಿಗಿಟ್ಟು ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡರ ಜೊತೆಗೂಡಿ ಚುನಾವಣೆ ನಡೆಸಿದ್ದು ಸರಿಯಲ್ಲ.

ಪಕ್ಷ ಸಂಘಟಿಸಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ. ಕಳೆದ ಬಾರಿ ಆಯ್ಕೆಯಾದ ಬಿಜೆಪಿ ಪುರಸಭೆ ಸದಸ್ಯರು ಮತ್ತು ಅಧ್ಯಕ್ಷ ರಾಮಮೂರ್ತಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಈಗ ಬಿಜೆಪಿ ಟಿಕೆಟ್ ಕೇಳುವುದು ಸರಿಯಲ್ಲ. ಪಕ್ಷಕ್ಕೆ ಸೇರದೇ ಆಕಾಂಕ್ಷಿ ಎನ್ನುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬೂತ್‌ ಕಾಯುವುದಕ್ಕೆ ಸೀಮಿತವಲ್ಲ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಚುನಾವಣೆಗಾಗಿ ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಂಡು, ಅಂತಿಮ ಕ್ಷಣದಲ್ಲಿ ಜೆಡಿಎಸ್‌ ಮುಖಂಡರೊಂದಿಗೆ ಸಿದ್ಧತೆ ನಡೆಸಿದರು. ಇದರಿಂದ ಕೆಲವು ಕಾರ್ಯಕರ್ತರಿಗೆ ಇರುಸು ಮುರಿಸು ಉಂಟಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ತಾಲೂಕಿನ ಬಿಜೆಪಿ ಕಾರ್ಯಕರ್ತರು ಕೇವಲ ವೋಟು ಹಾಕಿಸಲು, ಬೂತ್‌ ಕಾಯುವ ಕೆಲಸಕ್ಕೆ ಸೀಮಿತ ಮಾಡಿರುವ ಮುಖಂಡರ ವಿರುದ್ಧ ಕಿಡಿಕಾರಿದರು.

ಸಭೆಯಲ್ಲಿ ಕೆಲವು ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ ಸಮರ್ಪಕವಾಗಿ ಚುನಾವಣೆ ನಡೆಸಲು ವಿಫಲವಾಗವಾಗಿದ್ದಾರೆ. ಜೊತೆಗೆ ಐದು ತಿಂಗಳಿಂದ ಮಾಲೂರು ಕಡೆಗೆ ಮುಖ ಮಾಡಿಲ್ಲ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯಕ್ಷರಾಗಿ, ಪುರಸಭಾ ಚುನಾವಣೆಯಲ್ಲಿ ನಾನು ಇದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಆರು ತಿಂಗಳು ಬಿಜೆಪಿ ಹೆಸರೇಳಲು ಇಲ್ಲದಂತೆ ಕಾಣೆಯಾಗಿದ್ದ ನಾಯಕರು, ಈಗ ಬಂದು ಚುನಾವಣೆಯ ನಿಯಮಗಳು ಮತ್ತು ಪಕ್ಷ ನಿಷ್ಠೆಯ ಬಗ್ಗೆ ಭಾಷಣ ಮಾಡುತ್ತಿರುವುದು ಸಮಂಜಸವಲ್ಲ ಎಂದು ದೂರಿದರು.

ಪಕ್ಷ ಅಧಿಕಾರಕ್ಕೆ ತನ್ನಿ: ಲೋಕಸಭಾ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮಾತನಾಡಿ, 27 ವಾರ್ಡ್‌ಗಳ ಆಕಾಂಕ್ಷಿಗಳ ಪಟ್ಟಿಯನ್ನು ನೀಡಿ. ಸ್ಥಳೀಯವಾಗಿ ಯಾರು ಗುರುತಿಸಿಕೊಂಡಿದ್ದಾರೋ, ಗೆಲ್ಲುವ ಸಾಮರ್ಥಯ ಇರುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಬಿಜೆಪಿ ಗೆಲ್ಲಿಸುವ ಕೆಲಸ ಎಲ್ಲಾ ಮುಖಂಡರ ಮೇಲಿದೆ. ನನಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ಹೆಚ್ಚಿನ ಮತ ನೀಡಿದ್ದೀರಿ. ಅದೇ ರೀತಿ ಈ ಚುನಾವಣೆಯಲ್ಲೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕು ಎಂದರು.

ಬಿಜೆಪಿ ಮಾಜಿ ನಗರಾಧ್ಯಕ್ಷ ಎಂ.ಪಿ.ವಿಜಯಕುಮಾರ್‌ ಮಾತನಾಡಿ, ಮೂರು ಬಾರಿ ಸಕ್ರಿಯವಾಗಿ ಪಕ್ಷದ ಅಧ್ಯಕ್ಷರಾಗಿ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಈ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಬಂದಿರುವವರು ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಎಂಬಂತೆ ಸಾಬೀತಾಗುತ್ತಿದೆ. ಬಿಜೆಪಿ ಪಟ್ಟಣದಲ್ಲಿ ಪ್ರಬಲವಾಗಿದ್ದು, ತುಳಿಯುವಂತಹ ಕೆಲಸ ಮಾಡಲು ಹೊರಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಭೆಯಲ್ಲಿ ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ, ಮಾಜಿ ಶಾಸಕ ಎ.ನಾಗರಾಜ್‌, ಎಟ್ಟಕೋಡಿ ಕೃಷ್ಣಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಆರ್‌.ಪ್ರಭಾಕರ್‌, ತಾಲೂಕು ಅಧ್ಯಕ್ಷ ಬಿ.ಆರ್‌.ವೆಂಕಟೇಶ್‌, ನಗರಾಧ್ಯಕ್ಷ ಎಂ.ಸಿ.ರವಿ, ಪುರನಾರಾಯಣಸ್ವಾಮಿ, ಎಂ.ವಿ.ವೇಮನ, ಸಿ.ಪಿ.ನಾಗರಾಜ್‌, ಎಂ.ರಾಮಮೂರ್ತಿ, ತಾಪಂ ಮಾಜಿ ಅಧ್ಯಕ್ಷರಾದ ಚಂದ್ರಪ್ಪ, ಆನಂದ್‌, ಪುರಸಭಾ ಮಾಜಿ ಸದಸ್ಯರಾದ ಎ.ರಾಜಪ್ಪ, ಎಂ.ಕೆ.ಆಂಜಿ, ಸೋಮಣ್ಣ, ಗೀತಾವೆಂಕಟೇಶ್‌, ಭಾರತಮ್ಮ, ಅಮುದಾವೇಣು, ಅನಿತಾ ನಾಗರಾಜ್‌, ಲೀಲಾವತಿ ವೇಮನ, ಹನುಮಂತರೆಡ್ಡಿ, ನೀಲಾಚಂದ್ರ, ಹರೀಶ್‌ಗೌಡ, ಅಪ್ಪಿರಾಜು, ಹನುಮಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next