ಬಾಗಲಕೋಟೆ: ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ ಕುಡಿವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮವಹಿಸಬೇಕು ಎಂದು ಬೆಳಗಾವಿ ವಿಭಾಗದ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ ತಿಳಿಸಿದರು.
ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ ಒಟ್ಟು 209 ಜನವಸತಿಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸಬಹುದಾಗಿದೆ. ಈ ಪೈಕಿ 144 ಜನವಸತಿಗಳಿಗೆ ವಿವಿಧ ಯೋಜನೆಗಳಲ್ಲಿ ಪರಿಹಾರ ಕೈಗೊಳ್ಳಲು ಅನುದಾನ ಒದಗಿಸಲಾಗಿದೆ. ಉಳಿದ 65 ಜನವಸತಿಗಳಿಗೆ ಯೋಜನೆ ರೂಪಿಸಿ ತುರ್ತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 25 ಗ್ರಾಮಗಳಲ್ಲಿ 47 ಟ್ಯಾಂಕರ್‌ಗಳ ಮೂಲಕ ಹಾಗೂ 33 ಗ್ರಾಮಗಳಿಗೆ 42 ಖಾಸಗಿ ಬೋರ್‌ವೆಲ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳ ಜನಸಂಖ್ಯೆ ಮತ್ತು ಆ ಗ್ರಾಮಕ್ಕೆ ಎಷ್ಟು ನೀರು ಅವಶ್ಯಕತೆ ಇರುವ ಮಾಹಿತಿ ನೀಡಬೇಕು. ಅಲ್ಲಿರುವ ಜನರಿಗೆ ಎಷ್ಟು ಪ್ರಮಾಣದಲ್ಲಿ ನೀರು ಅವಶ್ಯಕತೆ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಯೋಜನೆ ರೂಪಿಸಬೇಕು. ಈಗಾಗಲೇ ಕುಡಿಯುವ ನೀರಿಗಾಗಿ ಕೈಗೊಂಡ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳಿಸಲು ತಿಳಿಸಿದರು.
ಬರ ನಿರ್ವಹಣೆಗೆ ಸರಕಾರಿ ನೀಡಿರುವ ಟಿಟಿಎಫ್ ಮತ್ತು ಸಿಆರ್‌ಎಫ್, ಟಿಟಿಎಫ್-1, 2, 3 ಹಾಗೂ ಸಿಆರ್‌ಎಫ್-1, 2, 3ರ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಪಾವತಿಸಲಾದ ಮೊತ್ತ ಹಾಗೂ ಬಾಕಿ ಇರುವ ಬಿಲ್ಗಳ ಮೊತ್ತಗಳ ವಿವರವನ್ನು ಕೇಳಿದಾಗ ಕೆಲವೊಂದು ಕಾಮಗಾರಿಗಳ ಬಿಲ್ ಪಾವತಿಯಾಗದಿರುವದನ್ನು ತಿಳಿದು ಶೀಘ್ರವೇ ಪಾವತಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಅಲ್ಲದೇ ಬರ ನಿರ್ವಹಣೆ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಸಮರ್ಪಕವಾದ ಕ್ರಿಯಾ ಯೋಜನೆ ರೂಪಿಸಿ ಅನುದಾನ ಬಳಕೆ ಮಾಡಲು ತಿಳಿಸಿದರು.
Advertisement
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬರ ಪರಿಸ್ಥಿತಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಟಿಟಿಎಫ್-1ರಡಿ 21 ಕಾಮಗಾರಿಗಳ ಪೈಕಿ 197 ಕಾಮಗಾರಿಗಳಲ್ಲಿ 202 ಕೊಳವೆಬಾವಿ ಕೊರೆಯಲಾಗಿದ್ದು, ಅದರಲ್ಲಿ 167 ಬೋರ್‌ಗಳು ಸಫಲವಾಗಿವೆ. 11 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಹಾಗೂ 2 ಪ್ಲಷಿಂಗ್ ಕಾಮಗಾರಿ ಅಳವಡಿಸಲಾಗಿದೆ. ಟಿಟಿಎಫ್-2 ಅಡಿ 203 ಕಾಮಗಾರಿಗಳಲ್ಲಿ 41 ಕಾಮಗಾರಿಗಳನ್ನು ಟಿಟಿಎಫ್-1ರಡಿ ಹೊಂದಾಣಿಕೆ ಮಾಡಿಕೊಂಡು ಉಳಿದ 162 ಕಾಮಗಾರಿಗಳಲ್ಲಿ 129 ಕೊಳವೆ ಬಾವಿ ಕೊರೆಯುವುದನ್ನು ಅಳವಡಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ನಗರ ಪ್ರದೇಶದಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕು. ನೀರಿನ ಸಮಸ್ಯೆಯುಂಟಾಗುವ ಪ್ರದೇಶಗಳಲ್ಲಿನ ವಸ್ತುಸ್ಥಿತಿ ಅರಿತು ಜನಸಂಖ್ಯೆ ಆಧಾರದ ಮೇಲೆ ಕುಡಿಯುವ ನೀರು ಪೂರೈಸುವ ಕೆಲಸವಾಗಬೇಕು. ಜಿಲ್ಲೆಯ ನಗರ ಪ್ರದೇಶಗಳಲ್ಲಿ 170 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಆ ಪೈಕಿ 109 ಕೊಳವೆ ಬಾವಿಗಳನ್ನು ಉಪಯೋಗಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ ಕುಡಿಯುವ ನೀರಿಗಾಗಿ 2 ಕಂತುಗಳಲ್ಲಿ 513 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಒಟ್ಟು 162 ಕಾಮಗಾರಿಗಳಿಗೆ ಕ್ರಿಯಾ ಯೋಜನೆಗೆ ಅನುಮೋದನ ನೀಡಿದ್ದು, ಈ ಪೈಕಿ 102 ಕಾಮಗಾರಿಗಳು ಪೂರ್ಣಗೊಂಡಿದ್ದು, 57 ಕಾಮಗಾರಿಗಳು ಪ್ರಗತಿಯಲ್ಲಿವೆ 3 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಸಮೀಕ್ಷೆಯ ಪ್ರಕಾರ ಮೇವಿನ ಲಭ್ಯತೆ, ಮೇವು ಪೂರೈಕೆ, ಮೇವಿನ ಕಿರು ಪೊಟ್ಟಣಗಳ ವಿವರ, ಮೇವು ನಿಧಿ ಪ್ರಾರಂಭಿಸುವ ಕುರಿತು ಚರ್ಚಿಸಿದರು.
ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಜಿಪಂ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಉಪ ವಿಭಾಗಾಧಿಕಾರಿಗಳಾದ ಎಚ್.ಜಯಾ ಮತ್ತು ಇಕ್ರಮ ಮುಂತಾದವರು ಉಪಸ್ಥಿತರಿದ್ದರು.
ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲಿಯವರೆಗೆ ಶೇ.40ರಷ್ಟು ಪ್ರಗತಿ ಸಾಧಿಸಬೇಕಾಗಿತ್ತು. ಈ ಪೈಕಿ ಶೇ.20.56ರಷ್ಟು ಮಾತ್ರ ಪ್ರಗತಿ ಕಂಡುಬಂದಿದ್ದು, ಹೆಚ್ಚಿನ ಪ್ರಗತಿಗೆ ಸೂಚಿಸಿದರು. ಶಾಲೆಗಳು ಪ್ರಾರಂಭವಾಗಿದ್ದು, ಈ ಸಾಲಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಖಾಳಜಿ ವಹಿಸಿ ಉತ್ತಮ ಫಲಿತಾಂಶಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲು ಆಯುಕ್ತರು ಸೂಚಿಸಿದರು.