Advertisement

ಅಗತ್ಯವಿದ್ದಲ್ಲಿ ಟ್ಯಾಂಕರ್‌ ನೀರು ಕೊಡಿ

12:20 PM May 10, 2019 | Team Udayavani |

ಬಾಗಲಕೋಟೆ: ಬರದ ತೀವ್ರತೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯ ಯಾವುದೇ ಗ್ರಾಮ, ಜನ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಸೂಚಿಸಿದರು.

Advertisement

ಗುರುವಾರ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಬರ ನಿರ್ವಹಣೆಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿ ತಾಲೂಕಿಗೆ ತಲಾ ರೂ. 30 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಆಯಾ ತಾಲೂಕಿನ ತಹಶೀಲ್ದಾರ್‌ರ ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆ ಬಾವಿಗಳ ಬಾಡಿಗೆ ದರ, ಮೇವು ಪೂರೈಕೆಗೆ ಬಳಸಬೇಕು ಎಂದು ತಿಳಿಸಿದರು.

ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾದ ಬಿಲ್ಗಳನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಶೀಲಿಸಿ, ಪಾವತಿ ಮಾಡಬೇಕು. ಜಿಲ್ಲೆಯ ಬಾದಾಮಿ ತಾಲೂಕಿನ 6, ಹುನಗುಂದ ತಾಲೂಕಿನ 5 ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದ್ದು, ಏಪ್ರಿಲ್ 30ರ ವರೆಗೆ ಒಟ್ಟು 23.68 ಲಕ್ಷ ರೂ. ಟ್ಯಾಂಕರ್‌ಗಳ ಬಿಲ್ ಆಗಿದೆ. ಈ ಹಣವನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 32,431 ಮೇವಿನ ಕಿರು ಪೊಟ್ಟಣಗಳನ್ನು ನೀರಾವರಿ ಸೌಲಭ್ಯ ಹೊಂದಿದ ರೈತರಿಗೆ ಮೇವು ಬೆಳೆಯುವ ಉದ್ದೇಶದಿಂದ ನೀಡಲಾಗಿದೆ. ಈ ಪೈಕಿ ಹೆಚ್ಚುವರಿಯಾಗಿ ಬೆಳೆದ ಮೇವನ್ನು ಉಳಿದ ರೈತರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

Advertisement

ತಾಲೂಕು ಟಾಸ್ಕಪೋರ್ಸ (ಟಿಟಿಎಫ್‌) 1 ಮತ್ತು ಎರಡು ಹಂತದಲ್ಲಿ ಒಟ್ಟು 9.54 ಕೋಟಿ (ಸಿಆರ್‌ಎಫ್‌ ಅನುದಾನ)ಗೆ ಅನುಮೋದನೆ ನೀಡಲಾಗಿದೆ. ಟಿಟಿಎಫ್‌ 1 ಮತ್ತು 2ರಲ್ಲಿ ಒಟ್ಟು 372 ಕಾಮಗಾರಿ ಕೈಗೊಂಡಿದ್ದು, ಈ ಪೈಕಿ 238 ಕಾಮಗಾರಿ ಮುಕ್ತಾಯಗೊಳಿಸಿ, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ 134 ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.

ನ್ಯಾಯ ಬೆಲೆ ಅಂಗಡಿಗೆ ಭೇಟಿ ಕೊಡಿ: ಜಿಲ್ಲೆಯ ಎಲ್ಲ ತಹಶೀಲ್ದಾರ್‌ರು, ಪ್ರತಿ ತಿಂಗಳು ಕನಿಷ್ಠ 2 ನ್ಯಾಯ ಬೆಲೆ ಅಂಗಡಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ಮಾಡಬೇಕು. ಅಲ್ಲದೇ ಯಾವುದೇ ಗ್ರಾಮ, ಪಟ್ಟಣದಲ್ಲಿ 5 ಎಕರೆಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿಯನ್ನು ಗುರುತಿಸಿ, ಸರ್ವೇ ಮಾಡಿಸಿ, ಒತ್ತುವರಿದಾರರಿಂದ ತೆರವುಗೊಳಿಸಬೇಕು. ಭೂ ಕಂದಾಯ, ಇತರೆ ಸರ್ಕಾರಿ ಬಾಕಿ ವಸೂಲಿಗೆ ಗುರಿ ನಿಗದಿಪಡಿಸಿಕೊಂಡು, ಕ್ರಮ ಕೈಗೊಳ್ಳಬೇಕು. ಭೂ ಸ್ವಾಧೀನ ಪ್ರಕ್ರಿಯೆ ಒಳಪಟ್ಟ ಜಮೀನುಗಳ ಅಳತೆ ಕಾರ್ಯವನ್ನು ಆದ್ಯತೆ ಮೇರೆಗೆ ಪೂರೈಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳಿಗೆ ಅಗತ್ಯ ಇರುವ ನಿವೇಶನ, ಭೂಮಿ ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೇ ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲು ಅಗತ್ಯ ನಿವೇಶನ, ಭೂಮಿ ಗುರುತಿಸುವಂತೆ ತಹಶೀಲ್ದಾರ್‌ ಹಾಗೂ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next