ಮದ್ದೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಮ್ಮಗಳ ಹೃದಯದಲ್ಲಿ ಸ್ಥಾನ ಕೊಟ್ಟಿರುವ ತಾವು, ತಮ್ಮ ಪುತ್ರ ನಿಖಿಲ್‌ಕುಮಾರಸ್ವಾಮಿ ಅವರಿಗೂ ಸ್ಥಾನ ನೀಡಬೇಕೆಂದು ಶಾಸಕಿ ಅನಿತಾಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಕೊಪ್ಪ ಗ್ರಾಮದ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಖಿಲ್‌ಕುಮಾರಸ್ವಾಮಿ ಸರಳ, ಸಜ್ಜನಿಕೆಯ ಮತ್ತು ಯುವ ಉತ್ಸಾಹಿಯಾಗಿದ್ದು, ನಿಮ್ಮ ಸೇವೆಗೊಂದು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ 9 ತಿಂಗಳಲ್ಲಿ ಜಿಲ್ಲೆಗೆ 8600 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಖಿಲ್‌ಕುಮಾರಸ್ವಾಮಿ ಶ್ರಮಿಸಲಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನೀಡುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ.
ಸಿನಿಮಾ ನಟರನ್ನು ನಂಬಿಕೊಂಡು ಎದುರಾಳಿ ಅಭ್ಯರ್ಥಿಗೆ ಮತ ಚಲಾವಣೆ ಮಾಡದಂತೆ ಕಿವಿಮಾತು ಹೇಳಿದರು. ತಾಲೂಕಿನ ಕೊಪ್ಪ, ಆಬಲವಾಡಿ, ನಂಬಿನಾಯಕನಹಳ್ಳಿ, ಚಾಕನಕೆರೆ, ಬೆಕ್ಕಳಲೆ, ಹೊಸಗಾವಿ, ಹಳ್ಳಿಕೆರೆ, ಸೋಮನಹಳ್ಳಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ತಮ್ಮ ಪುತ್ರನ ಪರ ಮತಯಾಚನೆ ನಡೆಸಿದರು.
ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಬಣ್ಣದವರ ಮಾತಿಗೆ ಮರುಳಾಗದೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈಗಾಗಲೇ ಕೊಪ್ಪ ಜಿ.ಪಂ. ವ್ಯಾಪ್ತಿಗೆ 500 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿದ್ದು ರಸ್ತೆ, ಕುಡಿಯುವ ನೀರು, ಶಾಲಾ, ಕಾಲೇಜು ನಿರ್ಮಾಣ, ಬಸ್, ಚರಂಡಿ ವ್ಯವಸ್ಥೆ ಇನ್ನಿತರೆ ಕಾಮಗಾರಿಗಳಿಗೆ ಮುಂದಾಗುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲು ಪಣತೊಟ್ಟಿರುವುದಾಗಿ ಹೇಳಿದರು.
ಈ ವೇಳೆ ಶಾಸಕ ಕೆ.ಟಿ. ಶ್ರೀಕಂಠೇಗೌಡ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಜಿಪಂ ಸದಸ್ಯರಾದ ಮರಿಹೆಗಡೆ, ರೇಣುಕಾ ಮುಖಂಡರಾದ ಸುಶೀಲ್‌ಕುಮಾರ್, ನಲಿಗೆರೆ ಬಾಲು, ಕುಶ, ಮಧುಕುಮಾರ್, ಚನ್ನರಾಜು, ರಾಮಚಂದ್ರು, ಮನೋಹರ್, ಅನಿಲ್‌ಕುಮಾರ್ ಹಾಜರಿದ್ದರು.