Advertisement

ಯಂತ್ರೋಪಕರಣ ಜೋಡಣೆಗೆ ಹಣ ಕೊಡಿ

03:21 PM Mar 14, 2017 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಸಮರ್ಪಕ ನೀರು ಪೂರೈಕೆಗಾಗಿ ಮಲಪ್ರಭಾದಿಂದ ನೀರೆತ್ತುವ ನೂತನ ಯಂತ್ರೋಪಕರಣಗಳ ಜೋಡಣೆಗೆ 24 ಕೋಟಿ ರೂ. ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಆಗ್ರಹಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷದ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ಸರ್ಕಿಟ್‌ ಹೌಸ್‌ನಲ್ಲಿ ಸೋಮವಾರ ಅವಳಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿ-ಗತಿ ಪರಿಶೀಲನೆಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಅವಳಿ ನಗರದಲ್ಲಿ 24/7 ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮಹಾನಗರ ಪಾಲಿಕೆಯಿಂದ ಕಳಿಸಲಾದ ಪ್ರಸ್ತಾವನೆ ರಾಜ್ಯ ಸರ್ಕಾರದ ಬಳಿಯಿದೆ. ಕೂಡಲೇ 24 ಕೋಟಿ ರೂ. ಬಿಡುಗಡೆಗೊಳಿಸಿ ಅವಳಿ ನಗರದ ಜನರಿಗೆ ಅನುಕೂಲತೆ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಲಾಗುವುದು ಎಂದರು. 

5-6 ದಿನಕ್ಕೊಮ್ಮೆ ನೀರು ನೀಡಿ: ಅವಳಿ ನಗರದ ಕೆಲ ಬಡಾವಣೆಗಳಿಗೆ 8-9 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದ ನಾಗರಿಕರಿಗೆ  ತೊಂದರೆಯಾಗಿದೆ. 5-6 ದಿನಗಳಿಗೊಮ್ಮೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್‌ ಕಾರಣದಿಂದ ಸಮಯದಲ್ಲಿ ವ್ಯತ್ಯಯವಾಗಿರಬಹುದು.

ಆದರೆ ಸಮರ್ಪಕ ನೀರು ಪೂರೈಕೆಯಾಗಬೇಕು. ಬೇಸಿಗೆಯಲ್ಲಿನೀರು ಸಿಗದಿದ್ದರೆ ಜನರಿಗೆ ತೊಂದರೆಯಾಗುತ್ತದೆ. ಜನರ ತೊಂದರೆ ಮನಗಂಡು ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಬೇಕು. ಪೈಪ್‌ ಒಡೆದರೆ ತ್ವರಿತ ಗತಿಯಲ್ಲಿ ದುರಸ್ತಿ ಮಾಡಿ, ನೀರು ಪೋಲಾಗದಂತೆ ತಡೆಯಬೇಕು ಎಂದರು.ಅವಳಿ ನಗರದಲ್ಲಿ 24/7 ನೀರು ಪೂರೈಕೆಗೆ ಪೈಪ್‌ಲೈನ್‌ ಜೋಡಣೆ ಕಾಮಗಾರಿ ತ್ವರಿತಗೊಳಿಸಬೇಕು.

Advertisement

ಏಪ್ರಿಲ್‌-ಮೇ ತಿಂಗಳಲ್ಲಿ ನೀರಿನ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. 24/7 ಯೋಜನೆಗೆ ಪೈಪ್‌ಲೈನ್‌ ಜೋಡಣೆ ಕಾರಣದಿಂದ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮಳೆಯಿಂದಾಗಿ ಮಲಪ್ರಭಾ ಜಲಾಶಯಕ್ಕೆ ನೀರು ಬಂದ ನಂತರ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಹೇಳಿದರು. 

24/7 ಯೋಜನೆಗೆ ಸಮರ್ಪಕ ವಿನ್ಯಾಸ ರೂಪಿಸುವುದು ಅವಶ್ಯಕ. ನಗರ ಎಲ್ಲ ದಿಶೆಗಳಲ್ಲಿ ಬೆಳೆಯುತ್ತಿದ್ದು, ಬಡಾವಣೆಗಳು ಹೆಚ್ಚಾಗುತ್ತಿವೆ.ನಗರದ ಬೆಳವಣಿಗೆಯನ್ನು ಪರಿಗಣಿಸಿ ಮುಂದೆ ಹೊಸ ಬಡಾವಣೆಗಳಿಗೂ ನೀರು ಪೂರೈಕೆ ಜಾಲ ವಿಸ್ತರಿಸಲು ಅನುಕೂಲವಾಗುವ ರೀತಿಯಲ್ಲಿಯೋಜನೆ ರೂಪಿಸಬೇಕು ಎಂದರು. 

ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, 24/7 ಯೋಜನೆಗಾಗಿ ನಗರದಲ್ಲಿ 1400ರಿಂದ 1500 ಕಿ.ಮೀ. ಪೈಪ್‌ಲೈನ್‌ ಜೋಡಣೆ ಮಾಡಬೇಕಿದೆ. ಪೈಪ್‌ಲೈನ್‌ ಜೋಡಣೆ ಸೇರಿದಂತೆ ನೀರು ವಿತರಣೆಗಾಗಿ 175 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 

ಅಮ್ಮಿನಬಾವಿಯಲ್ಲಿ ಜಾಕ್‌ವೆಲ್‌ ಹಾಗೂ ಹಲವೆಡೆ ಪಂಪ್‌ಸೆಟ್‌ಗಳನ್ನು ಬದಲಿಸಬೇಕು. ಅಮ್ಮಿನಬಾವಿಯಿಂದ ಧಾರವಾಡದವರೆಗೆ ಪೈಪ್‌ಲೈನ್‌ ಬದಲಿಸಬೇಕು. ಅಲ್ಲದೇ ಅಮ್ಮಿನಬಾವಿಯಿಂದ ನವನಗರಕ್ಕೆ ಪ್ರತ್ಯೇಕ ಪೈಪ್‌ ಲೈನ್‌ ಅಳವಡಿಸಲಾಗುವುದು. ದ್ವಿತೀಯ ಹಂತದ22 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಲ್ಲಿ 24/7 ಕಾರ್ಯ ಪೂರ್ಣಗೊಂಡಿದ್ದು, 9 ವಾರ್ಡ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಕೆಲ ದಿನಗಳಲ್ಲಿ ಅದು ಕೂಡ ಪೂರ್ಣಗೊಳ್ಳಲಿದೆ ಎಂದರು. ಸಭೆಯಲ್ಲಿ ಸಂಸದ ಪ್ರಹ್ಲಾದ ಜೋಶಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಮಹಾಪೌರ ಡಾ| ಪಾಂಡುರಂಗ ಪಾಟೀಲ, ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಜಲಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next