Advertisement
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಬಳಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಮನವಿ ಪತ್ರ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಿದರು. ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ಈ ಬಾರಿ ಶೇ.93ರಷ್ಟು ಮಳೆ ಕೊರತೆ ಉಂಟಾಗಿದೆ. ಕೇವಲ ಶೇ.7ರಷ್ಟು ಮಳೆ ಬಂದಿದ್ದು, ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಆದರೆ, ಬರದಿಂದ ಬಳಲಿದ ರಾಜ್ಯದ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ, ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಈ ಮಧ್ಯೆ, ಅಧ್ಯಯನ ಪ್ರವಾಸದ ವೇಳೆ ಅಧಿಕಾರಿಗಳ ತಂಡಕ್ಕೆ ಬರದ ಭೀಕರತೆಯ ಸಾಕ್ಷಾತ್ ದರ್ಶನವಾಯಿತು. ಅಧಿಕಾರಿಗಳ ಬಳಿ ಕೆಲವೆಡೆ ರೈತರು ನೀರಿಗಾಗಿ ಬೇಡಿಕೆ ಇಟ್ಟರು. ನಮಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪರಿಹಾರ ಬೇಡ. ನಮ್ಮ ಭೂಮಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಿ. ಕೆರೆಗಳಿಗೆ ನೀರು ತುಂಬಿಸಿ, ಆಗ ನಾವು ನೆಮ್ಮದಿಯ ಕೃಷಿ ಮಾಡುತ್ತೇವೆ. ಕುಡಿಯಲು ನೀರು ಪೂರೈಸಿ ಎಂದು ಮನವಿ ಮಾಡಿದರು. ಬರ ಅಧ್ಯಯನ ತಂಡದ ಸದಸ್ಯರು ಹೋದಲ್ಲೆಲ್ಲ ಉದ್ಯೋಗದ ಸಮಸ್ಯೆ, ಕುಡಿಯುವ ನೀರಿನ ಬವಣೆ ಮುಂದಿಟ್ಟ ರೈತರು, ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯಬೇಕೆಂದು ಕಣ್ಣೀರಿಟ್ಟು ಕೋರಿಕೊಂಡರು. ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದ್ದು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಉರಿಬಿಸಿಲಿನಲ್ಲಿ ಕಾದು ನಿಂತು ಮಹಿಳೆಯರು ನೀರು ತರುವ ಪರಿಸ್ಥಿತಿ ಇದೆ. ಮಳೆ, ಇಲ್ಲದೆ ಕೃಷಿ ಮಾಡುವುದೇ ಕಷ್ಟವಾಗಿದೆ. ಹಳ್ಳಿಯಲ್ಲಿ ಹಣ ಕೊಟ್ಟರೂ ಮೇವು ಮತ್ತು ನೀರು ಸಿಗುತ್ತಿಲ್ಲ. ಹೀಗಾದರೆ ಜಾನುವಾರುಗಳನ್ನು ಸಾಕುವುದು ಹೇಗೆ ಎಂದು ಅಳಲು ತೋಡಿಕೊಂಡರು.
Related Articles
Advertisement