Advertisement

ಹಿಜಾಬ್ ಗೆ ಅವಕಾಶ ಕೊಡಿ, ಇಲ್ಲವಾದರೆ ಪರೀಕ್ಷೆ ಮುಂದೂಡಿ: ಚಾ.ನಗರದಲ್ಲಿ ವಿದ್ಯಾರ್ಥಿನಿಯರು

12:28 PM Feb 26, 2022 | Team Udayavani |

ಚಾಮರಾಜನಗರ: ರಾಜ್ಯ ಹೈಕೋರ್ಟ್ ಹಿಜಾಬ್ ಧರಿಸುವಿಕೆ ಬಗ್ಗೆ ತನ್ನ ತೀರ್ಪು ಪ್ರಕಟಗೊಳಿಸುವವರೆಗೆ ನಮಗೆ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರಾದ ಹೀನಾ, ಖುತೇಜಾ, ಅಮೀನಾ, ಬೀಬಿ ಫಾತೀಮಾ ಹಾಗೂ ಶಿಫಾ, ನಾವು ಹಿಂದಿನಿಂದಲೂ ಕಾಲೇಜುವರೆಗೆ ಬುರ್ಖಾ ಧರಿಸಿ ಬಳಿಕ ಬುರ್ಖಾ ತೆಗೆದು ಹಿಜಾಬ್ ಧರಿಸಿ ತರಗತಿಗಳಿಗೆ ಹೋಗಿ ಪಾಠ ಕೇಳುತ್ತಿದ್ದೆವು. ಫೆ. 16ರವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಫೆ. 16ರ ಬಳಿಕ ನಮಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಹಿಜಾಬ್ ತೆರೆದು ಬಂದರಷ್ಟೇ ತರಗತಿಗೆ ಬನ್ನಿ, ಇಲ್ಲವಾದರೆ ಪ್ರವೇಶವಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ ಎಂದರು.

ನಾವು ಅಂದಿನಿಂದಲೂ ಕಾಲೇಜಿಗೆ ತೆರಳಿದರೂ ತರಗತಿಯೊಳಗೆ ಅವಕಾಶ ನೀಡುತ್ತಿಲ್ಲ. ಇದರಿಂದ ನಮಗೆ ಹಾಜರಾತಿ, ಪಾಠ ತಪ್ಪಿ ಹೋಗುತ್ತಿದೆ. ಹಿಜಾಬ್ ನಮ್ಮ ಧರ್ಮದ ಸಂಸ್ಕೃತಿ. ಅದನ್ನು ನಾವು ಏಕಾಏಕಿ ಬಿಡುವುದು ಸಾಧ್ಯವಿಲ್ಲ ಎಂದರು.

ಈ ಬಗ್ಗೆ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ಅವರು ನ್ಯಾಯಾಲಯದ ತೀರ್ಪಿನ ಬಗ್ಗೆ ಹೇಳುತ್ತಾರೆ. ಅಲ್ಲದೇ ನಿಮ್ಮ ಆಂತರಿಕ ಅಂಕಗಳನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ಕಾಲೇಜ್ ಕ್ಯಾಂಪಸ್‌ನಲ್ಲೂ ನಾವು ಕೂರಲು ಅವಕಾಶ ನೀಡದೇ ಕೂರುವ ಜಾಗಕ್ಕೆ ನೀರು ಸಿಂಪಡಿಸಲಾಗುತ್ತಿದೆ. ಇದಕ್ಕೆ ಹೆದರಿ ನಮ್ಮ ಸಮುದಾಯದ 40 ವಿದ್ಯಾರ್ಥಿನಿಯರ ಪೈಕಿ ಹಲವರು ಹಿಜಾಬ್ ಧರಿಸದೇ ತರಗತಿಗೆ ಹಾಜರಾಗುತ್ತಿದ್ದಾರೆ. ಆದರೆ, ನಾವು ನಮ್ಮ ಸಂಸ್ಕೃತಿಯನ್ನು ಏಕಾಏಕಿ ಬಿಡಲು ಸಾಧ್ಯವಿಲ್ಲ. ಹೀಗಾಗಿ ನಾವು 22 ಮಂದಿ ಹಿಜಾಬ್ ಇಲ್ಲದೇ ತರಗತಿಗೆ ಹೋಗುವುದಿಲ್ಲ. ಇದು ತಾರತಮ್ಯ ನೀತಿ, ಅಸಮಾನತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಿವಮೊಗ್ಗ: ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಿದ ವಿವಿಧ ಮಠಾಧೀಶರು

Advertisement

ಕಾಲೇಜು ಆಡಳಿತ ಮಂಡಳಿ ನ್ಯಾಯಾಂಗದ ಆದೇಶ ಪಾಲಿಸಬೇಕಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ನಮ್ಮ ಕಾಲೇಜಿನಲ್ಲಿ  ಸಮವಸ್ತ್ರ ಇದೆಯಾದರೂ ಅದಕ್ಕೆ ತಕ್ಕ ನಿಬಂಧನೆಗಳೇನೂ ಇಲ್ಲ. ನಾವು ಸಮವಸ್ತ್ರ ಧರಿಸಿಯೇ ಹೋಗುತ್ತಿದ್ದೇವೆ. ತಲೆ ಮುಚ್ಚುವಂತೆ ಹಿಜಾಬ್ ಧರಿಸುತ್ತೇವೆ. ಡ್ರೆಸ್ ಕೋಡ್ ಹೀಗೆ ಇರಬೇಕೆಂಬ ಬಗ್ಗೆ ವಿವರ ಇಲ್ಲ. ಆದ್ದರಿಂದ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಬಹುದು ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ನಾವು ಜಿಲ್ಲಾಧಿಕಾರಿ ಅವರ ಗಮನಕ್ಕೂ ತಂದಿದ್ದೇವೆ. ಹಾಗಾಗಿ ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೂ ನಮಗೆ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕು. ಅದಕ್ಕೆ ಅನುಮತಿ ನೀಡದಿದ್ದರೆ ಆನ್‌ಲೈನ್ ತರಗತಿ ನಡೆಸಬೇಕು. ಅದೂ ಸಾಧ್ಯವಿಲ್ಲವೆಂದರೆ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next