ಮೈಸೂರು: ಸೇವೆಯಿಂದ ನಿವೃತ್ತರಾದ ಪೊಲೀಸ್ ಅಧಿಕಾರಿಗಳಿಗೆ ಕ್ಯಾಂಟಿನ್ ಹಾಗೂ ಮಾಸಿಕ ಆರೋಗ್ಯ ತಪಾಸಣೆ ಸೌಲಭ್ಯ ಒಳಗೊಂಡ ಆರೋಗ್ಯ ಭಾಗ್ಯ ನೀಡುವಂತೆ ಕೆಎಸ್‌ಆರ್‌ಪಿ ನಿವೃತ್ತ ಕಮಾಂಡೆಂಟ್ ಎಸ್.ರಾಮದಾಸ್‌ಗೌಡ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ನಗರ ಪೊಲೀಸ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಜಿಲ್ಲಾ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ 5ನೇ ಪಡೆಯ ಸಂಯುಕ್ತಾಶ್ರಯದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಪೊಲೀಸ್ ಇಲಾಖೆ ಸಿಬ್ಬಂದಿಯ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತಾರೆಂಬ ಭರವಸೆ ಹೊಂದಿದ್ದೇವೆ. ಇಲಾಖೆ ಯಿಂದ ನಿವೃತ್ತರಾದವರಿಗೆ ಕ್ಯಾಂಟಿನ್ ಹಾಗೂ ಮಾಸಿಕ ಆರೋಗ್ಯ ಶಿಬಿರವನ್ನು ನೀಡಿರುವಂತೆ ಭವಿಷ್ಯದಲ್ಲಿ ಆರೋಗ್ಯ ಭಾಗ್ಯವನ್ನು ಒದಗಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಮಾತನಾಡಿ, ಪೊಲೀಸ್ ಇಲಾಖೆಗೆಂದು ಕಾಯ್ದೆ ಮತ್ತು ಕ್ಷೇಮಾಭಿವೃದ್ಧಿಗೆ ನಿಧಿ ಸ್ಥಾಪಿತ ವಾದ ದಿನವನ್ನು ಪೊಲೀಸ್ ಧ್ವಜ ದಿನಾ ಚರಣೆಯನ್ನಾಗಿ ಆಚರಿಸುತ್ತೆವೆ. ಬೇರೆ ಇಲಾಖೆಗಳಂತೆ ಬೆಳಗ್ಗೆ 9.30ಕ್ಕೆ ಕಚೇರಿಗೆ ಹೋಗಿ 5.30ಕ್ಕೆ ಮನೆಗೆ ತೆರಳುವ ಕೆಲಸ ಪೊಲೀಸ್ ಅಧಿಕಾರಿ ಗಳದ್ದಲ್ಲ. ಇತರ ಇಲಾಖೆಗಳ ಸಮಸ್ಯೆಗೂ ಸ್ಪಂದಿಸುವ ಕರ್ತವ್ಯ ನಮ್ಮ ದಾಗಿದೆ. ಬೇರೆ ಇಲಾಖೆಯಲ್ಲಿ ಪೊಲೀಸ್ ಇಲಾಖೆಯಂತಹ ಕುಟುಂಬ ಕಲ್ಪನೆ ಇರುವುದಿಲ್ಲ. ಇಲಾಖೆಯಿಂದ ನಿವೃತ್ತರಾದರೂ ಕುಟುಂಬ ದಿಂದಾಗುವುದಿಲ್ಲ ಎಂದು ತಿಳಿಸಿದರು.
ನಿವೃತ್ತರಾದ ಅಧಿಕಾರಿಗಳಾದ ಎ.ಎಸ್. ಉತ್ತಯ್ಯ, ವೈ.ಎಸ್.ಸಾಮ್ಯುಯಲ್, ಬಿ. ರಾಮಸ್ವಾಮಿ, ಜೆ. ಜಾನ್, ಎಂ.ಸಿ. ಮರಿಸ್ವಾಮಿ, ಜೆ. ವೆಂಕಟೇಶ್, ಗೋಪಾಲ, ಶ್ರೀಕಂಠಮೂರ್ತಿ, ಚಿಕ್ಕಯ್ಯ, ಪುಟ್ಟ ವೆಂಕಟರಮಣ, ಶ್ರೀನಿವಾಸ್, ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ, ಐಜಿಪಿ ವಿಪುಲ್ ಕುಮಾರ್, ಡಿಸಿಪಿಗಳಾದ ಡಾ.ಎಚ್.ಟಿ. ಶೇಖರ್, ರುದ್ರಮುನಿ, ಎಸಿಪಿ ಕಿತ್ತೂರ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.