ರಾಯಬಾಗ: ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠವನ್ನು ಬೆಳಗಾವಿಯಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗುರುವಾರ ತಹಶೀಲ್ದಾರ ಆರ್.ಎಚ್.ಬಾಗವಾನ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಕ್ರಮವನ್ನು ಖಂಡಿಸಿ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ ಮಾತನಾಡಿ, ರಾಜ್ಯ ಗ್ರಾಹಕರ ಆಯೋಗದ ಸಂಚಾರಿ ಪೀಠವನ್ನು ರಾಜ್ಯ ಸರ್ಕಾರ ಕಲಬುರ್ಗಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದು ಖಂಡನೀಯವಾಗಿದೆ. ಬೆಳಗಾವಿಗೆ ಮಂಜೂರಾಗಿದ್ದ ಪೀಠವನ್ನು ದೂರದ ಕಲಬುರ್ಗಿಗೆ ಸ್ಥಳಾಂತರಿಸಿದರೆ ಬೆಳಗಾವಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಕೀಲರಿಗೆ ಮತ್ತು ಪಕ್ಷಗಾರರಿಗೆ ತುಂಬ ತೊಂದರೆ ಆಗುತ್ತದೆ. ಮೊದಲಿನಂತೆ ಪೀಠವನ್ನು ಬೆಳಗಾವಿಯಲ್ಲೇ ಮುಂದುವರೆಸಬೇಕೆಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಸಂಖ್ಯೆ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯು ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೇರ ಸಂಪರ್ಕ ಹೊಂದಿದೆ. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠವನ್ನು ಮುಂದುವರೆಸದಿದ್ದರೆ ಅನಿರ್ದಿಷ್ಟ ಹೋರಾಟ, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೋಳ, ಆರ್. ಎಸ್.ಶಿರಗಾಂವೆ, ವಿ.ಎಸ್.ಪೂಜೇರಿ, ಬಿ.ಎನ್. ಬಂಡಗರ, ಮುರಗೇಶ ಕೋಟಿವಾಲೆ, ಎಸ್.ಎಮ್.ಕಳ್ಳೆ, ಎಸ್.ಸಿ.ದೀಕ್ಷಿತ, ಎಂ.ಜಿ.ಉಗಾರೆ, ಬಿ.ಎಸ್.ಪಾಟೀಲ, ಪಿ.ಆರ್.ಗುಡೊಡಗಿ, ಎಸ್.ಎಸ್.ತುಗದೂಲೆ, ಐ.ಎಂ. ಕುಂಬಾರ, ಜಿ.ಎಸ್.ಕಿಚಡೆ, ಅಮೀತ ಹಿರೇಮಠ, ಗಣೇಶ ಕಾಂಬಳೆ, ಸತ್ತರಾಜ ನಾಯಿಕ, ಜಿ.ಎಸ್. ಕಿಚಡೆ, ಎಸ್.ಬಿ.ಬಿರಾದಾರಪಾಟೀಲ, ಯು.ಎನ್. ಉಮರಾಣಿ, ಎಸ್.ಎಲ್.ಕೊಳಿಗುಡ್ಡೆ, ಕೆ.ಎಮ್. ಮದಾಳೆ, ಎನ್.ಎಸ್.ಪಾಟೀಲ ಸೇರಿದಂತೆ ಅನೇಕರು ಇದ್ದರು.