ಅರಸೀಕೆರೆ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ತೀವ್ರ ಕುಸಿತವಾದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ 15 ಸಾವಿರ ರೂ. ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ನ್ಯಾಫೇಡ್ ಕೇಂದ್ರವನ್ನು ಪ್ರಾರಂಭಿಸ ಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ತಾಲೂಕು ಕಲ್ಪತರು ವಿನ ನಾಡಾಗಿ, ಸುಭಿಕ್ಷತೆಯಿಂದ ಕೂಡಿತ್ತು. ಆದರೆ ಇತ್ತೀಚೆಗೆ ತೀವ್ರ ಮಳೆಯ ಕೊರತೆ, ಕಾರಣ ಅಂತರ್ಜಲ ಕುಸಿದಿದ್ದು, ತೆಂಗು ಬೆಳೆಗೆ ಇನ್ನಿಲ್ಲದ ರೋಗ ಬಾಧೆಯಿಂದ ತೆಂಗು ಮತ್ತು ಕೊಬ್ಬರಿಯ ಇಳುವರಿ ಕಡಿಮೆಯಾಗಿ ರೈತರು ತೀವ್ರ ಸಂಕಷ್ಟ ಅನುಭವಿಸು ತ್ತಿದ್ದಾರೆ ಎಂದರು.
ತಾಲೂಕಿನಲ್ಲಿ 28 ಲಕ್ಷಕ್ಕೂ ಹೆಚ್ಚು ತೆಂಗಿನ ಮರ ಗಳಿದ್ದು, ಕೊಬ್ಬರಿ ಮಾರಾಟದಿಂದ ಬರುವ ಹಣವನ್ನೆ ನಂಬಿ ಕೃಷಿ ಚಟುವಟಿಕೆ ಹಾಗೂ ಜೀವನ ನಿರ್ವಹಣೆ ನಡೆಸುತ್ತಿದ್ದಾರೆ ಎಂದರು. ಕಳೆದ ವರ್ಷ ಕ್ವಿಂಟಲ್ ಕೊಬ್ಬರಿಗೆ 18 ಸಾವಿರ ಬೆಲೆ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ಮಾರುಕಟ್ಟೆ ಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 9 ಸಾವಿರಕ್ಕೆ ಕುಸಿತ ವಾಗಿರುವ ಕಾರಣ ರೈತರ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದ ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಮಧ್ಯ ಪ್ರವೇಶಿಸಿ ನ್ಯಾಫೆಡ್ ಕೇಂದ್ರ ಪ್ರಾರಂಭಿಸಿ ಕೊಬ್ಬರಿಗೆ 15 ಸಾವಿರ ರೂ ಬೆಂಬಲ ಬೆಲೆ ನೀಡಿ ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಬುಧವಾರ ಮುಖ್ಯಮಂತ್ರಿಗಳನ್ನು ತೆಂಗುಬೆಳೆಗಾರರ ಕ್ಷೇತ್ರದ ಶಾಸಕರುಗಳ ನಿಯೋಗದೊಂದಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಲಾಗುವುದು, ಸರ್ಕಾರ ಸಮಸ್ಯೆ ಪರಿಹಾರಕ್ಕೆ ಅತ್ಯಂತ ತ್ವರಿತವಾಗಿ ಸ್ಪಂದಿಸದಿದ್ದರೆ ತಾಲೂಕಿನ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟವನ್ನು ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಶಾಸಕರು ಎಚ್ಚರಿಕೆ ನೀಡಿದರು.