ಸಾಗರ: ಕೇಂದ್ರ, ರಾಜ್ಯದಲ್ಲಿ ಹಾಗೂ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕೊನೆ ಪಕ್ಷ ಸ್ಥಳೀಯ ಸಂಸ್ಥೆಗಳ ಶಿವಮೊಗ್ಗ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಪ್ರಮುಖರೋರ್ವರಿಗೆ ಟಿಕೆಟ್ ಕೊಡುವ ಮೂಲಕ ಈ ಸಮುದಾಯಕ್ಕೆ ತನ್ನ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಅತ್ಯಂತ ತಳಮಟ್ಟದಲ್ಲಿದ್ದಾಗಲೂ, ಯಾವುದೇ ಒತ್ತಡಗಳಿಗೆ ಮಣಿಯದೆ ಇದೊಂದು ತಮ್ಮ ಪಕ್ಷ ಎಂಬ ಆಪ್ತತೆಯಿಂದ ಬ್ರಾಹ್ಮಣರು ಸೋಲು ಗೆಲುವುಗಳನ್ನು ಲೆಕ್ಕಹಾಕದೆ ಬಿಜೆಪಿಯನ್ನು ಲಾಗಾಯ್ತಿನಿಂದ ಬೆಂಬಲಿಸಿದ್ದನ್ನು ನಾವು ಕಾಣಬಹುದು. ಆ ತಳಹದಿಯ ಮೇಲೆಯೇ ಪಕ್ಷ ಬಹುಕಾಲ ಅಸ್ತಿತ್ವ ಉಳಿಸಿಕೊಂಡು ಈಗ ಅಧಿಕಾರ ಏರುವ ಮಟ್ಟಕ್ಕೆ ಬಂದಿದೆ ಎಂಬುದನ್ನು ಯಾರೂ ನಿರಾಕರಿಸಲಾರರು.
ಇದನ್ನೂ ಓದಿ:ರೈತರ ಹಿತ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಿದೆ: ಡಾ. ಸುಮನ್
ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಗೆಲುವಿನ ನೆಪದಲ್ಲಿ ಬ್ರಾಹ್ಮಣರನ್ನು ಅವಗಣನೆ ಮಾಡಿ ಜಾತಿ ಆಧಾರಿತವಾಗಿ, ಹಣಬಲದ ಆಧಾರಿತವಾಗಿ ಟಿಕೆಟ್ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿಯೂ ಇದೆ. ಹಾಗಾಗಿ ಹಲವು ಬಾರಿ ಬ್ರಾಹ್ಮಣರಿಗೆ ವಿಧಾನಸಭೆಯ ಟಿಕೆಟ್ ತಪ್ಪಿದೆ. ಋಣ ಸಂದಾಯ ನಮ್ಮ ಹಿಂದೂ ಸಂಪ್ರದಾಯವಾಗಲಿರುವಾಗ ಮತ್ತು ಬಿಜೆಪಿ ಭಾರತೀಯ ಸಂಸ್ಕೃತಿಯ ಪ್ರತಿಪಾದಕವಾಗಿರುವಾಗ ಈ ಬಾರಿ ಶಿವಮೊಗ್ಗ ಎಂಎಲ್‌ಸಿ ಕ್ಷೇತ್ರಕ್ಕೆ ಜಿಲ್ಲೆಯ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುವ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಸಮುದಾಯ ಶಿವಮೊಗ್ಗ ಜಿಲ್ಲೆಯಲ್ಲಿ ಸೋಲು ಗೆಲುವುಗಳನ್ನು ಪ್ರಭಾವಿಸುವ ಪ್ರಮಾಣದಲ್ಲಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಪಕ್ಷದೊಂದಿಗೆ ಹಲವು ದಶಕಗಳಿಂದ ಗುರ್ತಿಸಿಕೊಂಡು ಬಂದಿರುವ ಬ್ರಾಹ್ಮಣ ಸಮುದಾಯವನ್ನು ಪದೇ ಪದೇ ಪಕ್ಷ ನಿರ್ಲಕ್ಷಿಸಿದರೆ ದೂರಗಾಮಿಯಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಭಾವ ಬೀರಬಹುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.