ದಾವಣಗೆರೆ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಆರ್ ಪಿಎಸ್) ನೇತೃತ್ವದಲ್ಲಿ ನೂರಾರು ಸಾಗುವಳಿದಾರರು ಸೋಮವಾರ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದ್ದಾರೆ.
ಕಳೆದ 70-80 ವರ್ಷದಿಂದ ಜಿಲ್ಲೆಯಲ್ಲಿ ಸಾವಿರಾರು ಜನರು ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಜಮೀನಿನ ಹಕ್ಕುಪತ್ರ ಕೋರಿ ನಿರಂತರವಾಗಿ ಮನವಿ ಮಾಡಿಕೊಳ್ಳುವ ಜೊತೆಗೆ ಹೋರಾಟ ನಡೆಸುತ್ತಲೇ
ಬರುತ್ತಿದ್ದಾರೆ. ಕೆಲವರಿಗೆ ಬಿಟ್ಟರೆ ಅನೇಕರಿಗೆ ಈವರೆಗೆ ಹಕ್ಕುಪತ್ರ ನೀಡಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ
ಅತೀ ಅಗತ್ಯವಾಗಿರುವ ಹಕ್ಕುಪತ್ರ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು
ಒತ್ತಾಯಿಸಿದರು.
ಬಗರ್ ಹುಕುಂ ಸಾಗುವಳಿದಾರರ ನಿರಂತರ ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಸರ್ಕಾರ ಹಕ್ಕುಪತ್ರ ವಿತರಣೆಗೆ ಆದೇಶ ಹೊರಡಿಸಿದೆ. ಅದರಂತೆ ಅನೇಕರು ಸೂಕ್ತ ಅರ್ಜಿ ಸಲ್ಲಿಸಿದ್ದಾರೆ. ಆದರೂ, ಆಡಳಿತ ವರ್ಗ ರೈತರಿಗೆ ಹಕ್ಕುಪತ್ರ ನೀಡದೇ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಸಕಾರಣ ಇಲ್ಲದೆ ಅರ್ಜಿಗಳ ತಿರಸ್ಕಾರ ಮಾಡುತ್ತಿರುವುದರಿಂದ ಅನೇಕ ಸಾಗುವಳಿದಾರರು ಬೀದಿ ಪಾಲಾಗುತ್ತಿದ್ದಾರೆ. ತಕ್ಷಣ ಭೂವಿತರಣಾ ಸಮಿತಿ ರಚಿಸಿ, ಸರ್ವೇ ಮಾಡಿಸಿ, ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಮುಖಂಡರಾದ ಇ. ಶ್ರೀನಿವಾಸ್, ಜೆ. ಹಾಲೇಶ್‌ನಾಯ್ಕ, ಕೆ.ಎಲ್. ಭಟ್, ಹುಲಿಕಟ್ಟೆ
ಜಯಣ್ಣನಾಯ್ಕ, ಕೆ.ಎಚ್. ಆನಂದರಾಜ್, ರಾಜಣ್ಣ, ಹೇಮರಾಜ್, ಪರಶುರಾಮ್, ಜಯಮ್ಮ, ಕೆಂಚಮ್ಮ, ಶಾರದಮ್ಮ ಇತರರು ಇದ್ದರು.