Advertisement

ಉತ್ತರ ಕೊಡಿ “ಕೋಟಿ’ಗೆಲ್ಲಿ

10:58 AM Jun 20, 2019 | Lakshmi GovindaRaj |

ಜ್ಞಾನವೇ ಸಂಪತ್ತು… ಈ ಮಾತಿಗೆ “ಕನ್ನಡದ ಕೋಟ್ಯಾಧಿಪತಿ’ ಗೇಮ್‌ ಶೋ ಸಾಕ್ಷಿ. ಹೌದು, ಈಗಾಗಲೇ ಎಲ್ಲರ ಗಮನಸೆಳೆದಿರುವ “ಕನ್ನಡದ ಕೋಟ್ಯಾಧಿಪತಿ’ ಗೇಮ್‌ ಶೋ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ನಟ ಪುನೀತ್‌ರಾಜಕುಮಾರ್‌ ಅವರು ನಿರೂಪಿಸುತ್ತಿರುವುದು ಮತ್ತೊಂದು ವಿಶೇಷ.

Advertisement

ಐದು ವರ್ಷಗಳ ಬಳಿಕ ಪುನೀತ್‌ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ ಎಂಬುದು ಇನ್ನೊಂದು ವಿಶೇಷ. ಈ ಹಿಂದೆ “ಕನ್ನಡದ ಕೋಟ್ಯಾಧಿಪತಿ’ ಗೇಮ್‌ ಶೋ, ಚೆನ್ನೈನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದರೆ, ಈ ಬಾರಿ ಕಲರ್ಸ್‌ ಕನ್ನಡ ವಾಹಿನಿ ಬೆಂಗಳೂರಲ್ಲೇ ಅದ್ಧೂರಿ ಸೆಟ್‌ ಹಾಕಿ, ವರ್ಣರಂಜಿತ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ.

ಈ ಕಾರ್ಯಕ್ರಮ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್‌, 90 ರ ದಶಕದಲ್ಲಿ ಟಿವಿಯನ್ನು ಮೂರ್ಖರ ಪೆಟ್ಟಿಗೆ ಎನ್ನಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾದಂತೆ, ಅದನು ಜಾಣ ಪೆಟ್ಟಿಗೆ ಅಂತ ಕರೆಯಲಾಗುತ್ತಿದೆ. ಉಳಿದ ಸಂದರ್ಭದಲ್ಲಿ ಮಾತ್ರ ಒಂದಷ್ಟು ವಾದಗಳಿವೆ. ಅದೇನೆ ಇದ್ದರೂ, ಈ “ಕನ್ನಡದ ಕೋಟ್ಯಾಧಿಪತಿ’ ಶೋಗೆ ಒಳ್ಳೆಯ ಮೆಚ್ಚುಗೆ ಇದೆ. ಹೊಸದೊಂದು ಫೀಲ್‌ ಕೂಡ ಇದೆ.

ಪುನೀತ್‌ ಅವರು ನಡೆಸಿಕೊಡಲಿರುವ ಈ ಶೋ ಸಾಕಷ್ಟು ಕುತೂಹಲ ಕೆರಳಿಸಿದೆ. ಏಪ್ರಿಲ್‌ ಮೊದಲ ವಾರದಲ್ಲಿ ಸ್ಪರ್ಧಿಗಳ ಆಯ್ಕೆ ನಡೆದಿತ್ತು. ಪ್ರಶ್ನೆಗಳ ಮೂಲಕ ಅವರ ಜಾಣತನದ ಉತ್ತರವನ್ನು ಗಮನಿಸಿ, ಅತೀ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ಈ ಶೋಗೆ ಪ್ರತಿಕ್ರಿಯಿಸಿದ್ದ ಸಂಖ್ಯೆ ಲಕ್ಷಕ್ಕೂ ಅಧಿಕ. ಆ ಪೈಕಿ ಸಾವಿರಾರು ಜನರನ್ನು ಭೇಟಿ ಮಾಡಿ, ಅವರನ್ನು ಪರೀಕ್ಷಿಸಿ, ಆ ಪೈಕಿ ಒಂದಷ್ಟು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಒಟ್ಟು 40 ಎಪಿಸೋಡ್‌ ಪ್ರಸಾರ ಮಾಡುವ ಉದ್ದೇಶವಿದೆ ಎಂದು ವಿವರ ಕೊಟ್ಟರು ಪರಮೇಶ್ವರ್‌ ಗುಂಡ್ಕಲ್‌. “ಕನ್ನಡದ ಕೋಟ್ಯಾಧಿಪತಿ’ ಗೇಮ್‌ ಶೋ ನಿರೂಪಿಸುವ ಜವಾಬ್ದಾರಿ ಹೊತ್ತಿರುವ ಪುನೀತ್‌ರಾಜಕುಮಾರ್‌ ಅವರಿಗೆ ಈ ಶೋ ನಡೆಸಿಕೊಡುತ್ತಿರುವುದಕ್ಕೆ ಹೆಮ್ಮೆ ಇದೆಯಂತೆ. ಆ ಬಗ್ಗೆ ಹೇಳುವ ಅವರು, “ಪುನಃ ಈ ಶೋಗೆ ಬಂದಿದ್ದೇನೆ. 2011 ರಲ್ಲಿ ಈ ಜರ್ನಿ ಶುರುಮಾಡಿದೆ.

Advertisement

ಅಪ್ಪಾಜಿಗೆ ಹಿಂದಿಯಲ್ಲಿ ಬರುತ್ತಿದ್ದ “ಕೌನ್‌ ಬನೇಗಾ ಕರೋಡ್‌ಪತಿ’ ತುಂಬ ಇಷ್ಟವಾಗಿತ್ತು. ನನಗೂ ಅದು ಇಷ್ಟವಾಗಿತ್ತು. ಆ ಶೋ ಕನ್ನಡದಲ್ಲಿ ಆಗುತ್ತೆ, ಅದಕ್ಕೆ ನಾನು ನಿರೂಪಣೆ ಮಾಡಬೇಕು ಅಂದಾಗ ಆರಂಭದಲ್ಲಿ ಭಯ ಇತ್ತು. ಆದರೂ, ಒಪ್ಪಿಕೊಂಡೆ. ಅಮಿತಾಭ್‌ ಬಚ್ಚನ್‌ ಅವರನ್ನೂ ಭೇಟಿ ಮಾಡಿದ್ದೆ. ಶೋ ಯಶಸ್ಸು ಆಗುತ್ತಾ ಎಂಬ ಭಯದಲ್ಲೇ ಕೆಲಸ ಮಾಡಿದ್ದೆ.

ಭರ್ಜರಿ ಯಶಸ್ಸು ಪಡೆದಿತ್ತು. ಈಗ ಪುನಃ ಈ ಶೋ ನಡೆಸಿಕೊಡುತ್ತಿದ್ದೇನೆ. ಸೀಟಲ್ಲಿ ಕೂತಾಗ, ಜವಾಬ್ದಾರಿ ಹೆಚ್ಚುತ್ತೆ. ಇನ್ನಷ್ಟು ಎನರ್ಜಿ ಸಿಗುತ್ತೆ. ಸ್ಪರ್ಧಿಗಳು ಗೆದ್ದರೆ ಮೊದಲು ನಾನು ಖುಷಿ ಪಡುತ್ತೇನೆ. ಏಳೆಂಟು ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟರೆ, ಅವರ ಬದುಕೇ ಬದಲಾಗುತ್ತದೆ. ಸರಸ್ವತಿ ಜೊತೆ ಬರುವ ಸ್ಪರ್ಧಿಗಳು ಲಕ್ಷ್ಮೀ ಜೊತೆ ಹೋಗಬೇಕೆಂಬ ಆಸೆ ನನ್ನದು.

ಈ “ಕನ್ನಡದ ಕೋಟ್ಯಾಧಿಪತಿ’ ಶೋ ಮೂಲಕ ನನಗೂ ಇನ್ನಷ್ಟು ವಿಷಯ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ’ ಎಂದರು ಅವರು. ವಯಾಕಾಮ್‌ 18 ಸಂಸ್ಥೆಯ ರೀಜನಲ್‌ ಎಂಟರ್‌ಟೈನ್‌ಮೆಂಟ್‌ ಮುಖ್ಯಸ್ಥ ರವೀಶ್‌ಕುಮಾರ್‌, “ಕನ್ನಡದ ಕೋಟ್ಯಾಧಿಪತಿ’ ನಿರ್ಮಾಪಕ ಸ್ಟುಡಿಯೋ ನೆಕ್ಸ್ಟ್ ಮುಖ್ಯಸ್ಥ ಇಂದ್ರನೀಲ್‌ ಚಕ್ರವರ್ತಿ, ಗೌರವ್‌ ಶರ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next