Advertisement

ಕಬ್ಬು ಬೆಳೆಯುವ ತಾಂತ್ರಿಕತೆ ಮಾಹಿತಿ ನೀಡಿ

03:44 PM Oct 05, 2018 | |

ದಾವಣಗೆರೆ: ಕೃಷಿ ಇಲಾಖೆಯಿಂದ ಕಬ್ಬು ಬೇಸಾಯದ ಬಗ್ಗೆ ತಾಂತ್ರಿಕ ಮಾಹಿತಿ ಅವಶ್ಯಕತೆ ಇದೆ. ಹಾಗಾಗಿ ಬೆಳಗಾವಿ ಮಾದರಿಯಲ್ಲಿ ರೈತರಿಗೆ ಕಬ್ಬು ಬೆಳೆಯುವ ತಾಂತ್ರಿಕತೆ ತಿಳಿಸಿಕೊಡಬೇಕಿದೆ ಎಂದು ಲೋಕಿಕೆರೆ ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಚ್‌. ಓಬಳಪ್ಪ ಹೇಳಿದ್ದಾರೆ.

Advertisement

ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡ 2018-19ಸಾಲಿನ ಆತ್ಮ… ಯೋಜನೆಯಡಿ ಕಬ್ಬು ಬೆಳೆಯುವ ರೈತರಿಗೆ ಕಿಸಾನ್‌ ಗೋಷ್ಠಿ ಹಾಗೂ ಮಣ್ಣು ಆರೋಗ್ಯ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ಭಾಗದ ರೈತರು ಕಬ್ಬಿನ
ಇಳುವರಿ ಎಕರೆಗೆ 100 ಟನ್‌ ಬೆಳೆದು ಹಾಗೂ ಹೆಚ್ಚು ಲಾಭ ಪಡೆಯಬೇಕಿದೆ ಎಂದು ಆಶಿಸಿದರು.

ನೂತನ ತಾಂತ್ರಿಕತೆಗಳಾದ ಒಂದುಗಣ್ಣು ನಾಟಿ, ಕಬ್ಬಿನ ಸಸಿ ತಯಾರಿಕೆ, ಅಂಗಾಂಶ ಕೃಷಿ ಮಾದರಿಯಲ್ಲಿ ಸಸಿ ಪಡೆದುಕೊಂಡು ಹಾಗೂ ಸ್ವಂತ ಬೀಜ ಹೊಲದಲ್ಲೆ ಬೆಳೆದು ನಾಟಿ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದು ತಿಳಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕಿ ಡಾ| ಹಂಸವೇಣಿ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಕಬ್ಬು ಉತ್ಪಾದನೆ ಹೆಚ್ಚಿಸಲು ಈ ಗ್ರಾಮದಲ್ಲಿ ಪ್ರಾತ್ಯಕ್ಷತೆ ಕೈಗೊಳ್ಳಲಾಗಿದೆ. ಉಚಿತವಾಗಿ ಸಾವಯವ ಗೊಬ್ಬರ, ಜಿಂಕ್‌, ಲಘು ಪೋಷಕಾಂಶ ಹಾಗೂ ಅಂತರಬೆಳೆ ಹಲಸಂದಿ ಬೀಜ ವಿತರಿಲಾಗಿದೆ. ಸಾವಯವ ಗೊಬ್ಬರ, ಜಿಂಕ್‌, ಲಘು ಪೋಷಕಾಂಶ ಬಳಸುವುದರಿಂದ ಇಳುವರಿ ಹೆಚ್ಚಿಸಬಹುದು ಎಂದು ತಿಳಿಸಿದರು. 

ಕೃಷಿ ಇಲಾಖೆಯಿಂದ ಕೆ-ಕಿಸಾನ್‌ ಕಾರ್ಯಕ್ರಮ ಪ್ರಾರಂಭವಾಗಿದೆ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಸಂಖ್ಯೆ, ಪಹಣಿ, ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲ ಪ್ರಮಾಣ ಪತ್ರವನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿಸಿದ ಎಲ್ಲಾ ರೈತರು ಕೆ-ಕಿಸಾನ್‌ಕಾರ್ಡ್‌ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

Advertisement

ಆತ್ಮ ಉಪ ಯೋಜನೆಯ ನಿರ್ದೇಶಕ ಎಸ್‌.ಬಿ. ರಾಜಶೇಖರಪ್ಪ ಮಾತನಾಡಿ, ಕಬ್ಬಿನಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಪಡೆಯುವುದು ಸಾಧ್ಯವಿಲ್ಲ. ಸಾವಯವ ಗೊಬ್ಬರದಿಂದ ಅಧಿಕ ಇಳುವರಿ ಸಿಗಲಿದೆ. ಕಬ್ಬಿನಲ್ಲಿ ಇತ್ತೀಚಿನ ದಿನದಲ್ಲಿ ಗೊಣ್ಣೆಗಳ ಬಾಧೆ ಹೆಚ್ಚಾಗಿದೆ. ಮೇಟರೈಜಿಯಮ್‌ ಬಳಸುವುದರಿಂದ ಹತೋಟಿ ಆಗಲಿದೆ ಎಂದು ತಿಳಿಸಿದರು. 

ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ, ರೈತರಿಗೆ ಇಲಾಖೆಯಲ್ಲಿ ದೊರೆಯುವ ಸಬ್ಸಿಡಿ ಹಾಗೂ ಪರಿಕರಗಳು, ಕೀಟನಾಶಕ, ತುಂತುರು ನೀರಾವರಿ ಘಟಕದ ಬಗ್ಗೆ ವಿವರಿಸಿ, ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಸಕಾಲದಲ್ಲಿ
ತಲುಪಿಸುವುದಾಗಿ ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಕೃಷಿ ಅಧಿಕಾರಿ ದುರುಗಪ್ಪ ಇತರರು ಇದ್ದರು. ಒಂದುಗಣ್ಣು ಪದ್ಧತಿಯಲ್ಲಿ ಹೆಚ್ಚು ಇಳುವರಿ ಪಡೆದ ರೈತ ಎನ್‌. ಹನುಮಂತಪ್ಪರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರೈತರಿಗೆ ಎನ್‌ ಎಫ್‌ಎಸ್‌ಎಂ ಪರಿಕರ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next