Advertisement

ಖರ್ಚು-ವೆಚ್ಚ ವರದಿ ನೀಡಿ: ಡಿಸಿ

11:36 AM Jun 03, 2018 | |

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಜೂ. 15ರೊಳಗಾಗಿ ಚುನಾವಣೆಗೆ ಖರ್ಚು ಮಾಡಿರುವ ಖರ್ಚು-ವೆಚ್ಚಗಳ ಅಂತಿಮ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆರ್‌.
ವೆಂಕಟೇಶಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ ಅಭ್ಯರ್ಥಿಗಳು, ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ಲೆಕ್ಕಪತ್ರ ತಂಡದವರಿಗೆ ಖರ್ಚು ವೆಚ್ಚಗಳ ಮಾಹಿತಿ ನೀಡಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡು ತಿಂಗಳೊಳಗಾಗಿ ಅಭ್ಯರ್ಥಿಗಳು ಮಾಡಿರುವ ಖರ್ಚು-ವೆಚ್ಚಗಳ ಅಂತಿಮ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಕಾಲದಲ್ಲಿ ಮಾಹಿತಿ ಸಲ್ಲಿಸದಿದ್ದಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಚುನಾವಣಾ ಖರ್ಚು-ವೆಚ್ಚಗಳ ದಾಖಲಾತಿ ಕುರಿತು ಪಿಪಿಟಿ ಮೂಲಕ ವಿವರಿಸಿ, ಅಭ್ಯರ್ಥಿಗಳು ಚುನಾವಣೆಗಾಗಿ ಕೈಗೊಂಡಿರುವ ಖರ್ಚು ವೆಚ್ಚಗಳ ಓಚರ್‌ ಮತ್ತು ಬಿಲ್ಲುಗಳನ್ನು ಸಹಿ ಮಾಡಿ
ಸಲ್ಲಿಸಬೇಕು. ಚುನಾವಣೆ ವೆಚ್ಚಕ್ಕಾಗಿ ತೆರೆದ ಬ್ಯಾಂಕ್‌ ಖಾತೆ ವಿವರ ಪಟ್ಟಿಯನ್ನು ದೃಢೀಕರಿಸಿ ಸಲ್ಲಿಸಬೇಕು. 20 ಸಾವಿರಕ್ಕಿಂತ ಹಚ್ಚಿನ ಹಣವನ್ನು ಒಂದೇ ವ್ಯಕ್ತಿಗೆ ನಗದು ರೂಪದಲ್ಲಿ ಸಂದಾಯ ಮಾಡಿರಬಾರದು ಎಂದರು.

ಅಭ್ಯರ್ಥಿಗಳು ಚುನಾವಣೆ ಖರ್ಚು ವೆಚ್ಚ ನಮೂದಿಸಿರುವ ಬಿಳಿ ಪುಸ್ತಕದಂತೆ ಒಟ್ಟು 9 ಅನುಸೂಚಿಗಳನ್ನು ಭರ್ತಿ ಮಾಡಿ
ಸಲ್ಲಿಸಬೇಕು. 10 ಲಕ್ಷ ರೂ. ವೆಚ್ಚ ಮಾಡಿದ್ದರೆ 100ರೂ.ಗಳ ಛಾಪಾ ಕಾಗದದ (ಬಾಂಡ್‌) ಮೇಲೆ ಖರ್ಚು ವೆಚ್ಚದ ಮಾಹಿತಿ ನೀಡಬೇಕು. 10 ಲಕ್ಷ ರೂ.ಗಿಂತ ಹೆಚ್ಚಿನ ಮುಂದಿನ ಪ್ರತಿ 10 ಲಕ್ಷ ರೂ.ಗಳಿಗೆ 100ರೂ.ಗಳಂತೆ ಛಾಪಾ ಕಾಗದದ ಮೇಲೆ ಮಾಹಿತಿ ನೀಡಬೇಕು. ಅನುಸೂಚಿ 7ರಲ್ಲಿ ಅಭ್ಯರ್ಥಿಯು ತನ್ನ ಸ್ವಂತ ಹಣ ಚುನಾವಣೆಗಾಗಿ ಖರ್ಚು ಮಾಡಿರುವುದು, ಅನುಸೂಚಿ 8ರಲ್ಲಿ ಪಕ್ಷದಿಂದ ಪಡೆದ ಅಥವಾ ಖರ್ಚು ಮಾಡಿದ ಹಣದ ವಿವರ ಹಾಗೂ ಅನುಸೂಚಿ 9ರಲ್ಲಿ ಇತರರಿಂದ ಪಡೆದ ಹಣದ ವಿವರ ಸಲ್ಲಿಸಬೇಕು.

Advertisement

ಈ ಮೂರು ಅನುಸೂಚಿಗಳ ಮೊತ್ತವು ಅಭ್ಯರ್ಥಿಯ ಬ್ಯಾಂಕ್‌ ಖಾತೆಯಲ್ಲಿರುವ ಒಟ್ಟು ಮೊತ್ತಕ್ಕೆ ತಾಳೆಯಾಗಬೇಕು ಎಂದು ವಿವರಿಸಿದರು. ಸಭೆಯಲ್ಲಿ ವಿವಿಧ ಪಕ್ಷಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಏಜೆಂಟರು, ಲೆಕ್ಕಪತ್ರ ತಂಡದ ಮುಖ್ಯಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next